‘ಕಾಕ್‌ಟೇಲ್ 2’ ಚಿತ್ರದಲ್ಲಿ ರಶ್ಮಿಕಾ ಸಲಿಂಗಿ ಪಾತ್ರ?

ಶಾಹಿದ್ ಕಪೂರ್, ಕೃತಿ ಸನನ್, ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಕಾಕ್‌ಟೇಲ್ 2’ ಚಿತ್ರದಲ್ಲಿ ಕೃತಿ ಮತ್ತು ರಶ್ಮಿಕಾ ಸಲಿಂಗಪ್ರೇಮಿ ಜೋಡಿಯಾಗಿ ನಟಿಸುತ್ತಿದ್ದಾರೆ ಎಂದು ಗಾಸಿಪ್ ಹರಿದಾಡುತ್ತಿದೆ.

ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಅವರ ಸಂಬಂಧದ ಮಧ್ಯೆ ಶಾಹಿದ್ ಕಪೂರ್ ಎಂಟ್ರಿ ಕೊಡುತ್ತಾರೆ ಎಂದು ಗಾಸಿಪ್ ಹರಿದಾಡುತ್ತಿತ್ತು.  ಈ ವದಂತಿಗಳಿಗೆ ‘ಕಾಕ್‌ಟೇಲ್ 2’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ-ನಾಯಕಿಯರು ಬ್ರೇಕ್ ಹಾಕಿದ್ದಾರೆ.

ನಿರ್ದೇಶಕ ಹೋಮಿ ಅದಾಜಾನಿಯಾ,  ‘ಚಿತ್ರೀಕರಣದ ಸೆಟ್‌ನಲ್ಲಿ ನಾವೆಲ್ಲಾ ಒಟ್ಟಿಗೆ ಕುಳಿತಿದ್ದೆವು. ಕೃತಿ ಮತ್ತು ರಶ್ಮಿಕಾ ಇಬ್ಬರೂ ಆಪ್ತ ಗೆಳತಿಯರಾದ್ದರಿಂದ ಸೆಟ್‌ನಲ್ಲಿ ಆತ್ಮೀಯವಾಗಿ ಇರುತ್ತಿದ್ದರು. ಆಗ ನಾವು ಸುಮ್ಮನೆ ತಮಾಷೆಗೆ ಒಂದು ವೇಳೆ ಇವರಿಬ್ಬರದ್ದೇ ಲವ್ ಸ್ಟೋರಿ ಆಗಿದ್ದು, ಶಾಹಿದ್ ಮೂರನೇ ವ್ಯಕ್ತಿಯಾಗಿ ಬಂದರೆ ಹೇಗೆ ಎಂದು ಯೋಚಿಸಿದೆವು. ಅಂತಹ ಸಿನಿಮಾ ಮಾಡಲು ನನಗೇನೂ ಅಭ್ಯಂತರವಿಲ್ಲ ಎಂದಿದ್ದೆ. ಅಲ್ಲಿಂದ ಈ ವದಂತಿ ಹಬ್ಬಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ವೇದಿಕೆಯ ಮೇಲೆ ಕೃತಿ ಮತ್ತು ರಶ್ಮಿಕಾ ಅವರು  ಜಿಮ್‌ನಲ್ಲಿ ಒಟ್ಟಿಗೆ ವರ್ಕೌಟ್ ಮಾಡುವಾಗ ಶುರುವಾದ ಸ್ನೇಹ, ಶೂಟಿಂಗ್ ವೇಳೆ ತುಂಬಾ ಸುಲಭ ಮತ್ತು ಆರಾಮದಾಯಕವಾಗಿತ್ತು ಎಂದರು. ಆಗ ಶಾಹಿದ್ ಕಪೂರ್  , ‘ನಿಮ್ಮಿಬ್ಬರ ನಡುವಿನ ಈ ನ್ಯಾಚುರಲ್ ಕೆಮಿಸ್ಟ್ರಿಯೇ ಜನ ನಿಮ್ಮನ್ನು ಲೆಸ್ಬಿಯನ್ ಜೋಡಿ ಅಂದುಕೊಳ್ಳಲು ಕಾರಣವಿರಬಹುದು’ ಎಂದರು.

ಇದಕ್ಕೆ ಉತ್ತರಿಸಿದ ಕೃತಿ ಸನನ್, ‘ಇದು ಸಮಾಜದ ಬೇಸರ ತರಿಸುವ ಯೋಚನೆ. ಇಬ್ಬರು ಹುಡುಗರು ಒಟ್ಟಿಗಿದ್ದರೆ ಅದನ್ನು ಬ್ರೋಮ್ಯಾನ್ಸ್ ಎನ್ನುತ್ತಾರೆ. ಅದೇ ಇಬ್ಬರು ಹುಡುಗಿಯರು ಆತ್ಮೀಯವಾಗಿದ್ದರೆ ಅವರು ಕೇವಲ ಸ್ನೇಹಿತರಾಗಿರಲು ಸಾಧ್ಯವೇ ಇಲ್ಲ ಎಂದು ಜನ ಅಂದುಕೊಳ್ಳುತ್ತಾರೆ. ಅವರ ಮಧ್ಯೆ ಬೇರೇನೋ ಇರಬೇಕು ಅಂತ ಯೋಚಿಸುತ್ತಾರೆ’ ಎಂದು  ಟೀಕಿಸಿದರು.

ಹೋಮಿ ಅದಾಜಾನಿಯಾ ನಿರ್ದೇಶನದ ‘ಕಾಕ್‌ಟೇಲ್ 2’ ಸಿನಿಮಾ ಜೂನ್ 19ರಂದು ಬಿಡುಗಡೆಯಾಗಲಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!