ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಪೆದ್ದಿ’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಬೆಂಗಳೂರಿನಲ್ಲಿ ಓಪನ್ ಆಗಿದ್ದು, ಸಿಂಗಲ್ ಸ್ಕ್ರೀನ್ಗಳಲ್ಲಿ 200 ರಿಂದ 250ಕ್ಕೆ ಟಿಕೆಟ್ ಕಾಯ್ದಿರಿಸಬಹುದಾಗಿದೆ.
‘ಪೆದ್ದಿ’ ಸಿನಿಮಾ ಜೂನ್ 4 ಕ್ಕೆ ಬಿಡುಗಡೆ ಆಗಲಿದೆ. ಬೆಂಗಳೂರಿನಲ್ಲಿ ‘ಪೆದ್ದಿ’ ಸಿನಿಮಾದ ತೆಲುಗು, ಕನ್ನಡ, ಹಿಂದಿ ಮತ್ತು ತಮಿಳು ಆವೃತ್ತಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಕನ್ನಡಕ್ಕೆ ಈವರೆಗೆ 12 ಶೋಗಳನ್ನು ನೀಡಲಾಗಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ತಮಿಳಿನ ಎರಡು ಶೋಗಳು, ಹಿಂದಿಯ ಒಂದು ಶೋ ಪ್ರದರ್ಶನವಾಗುತ್ತಿದೆ. ತೆಲುಗಿಗೆ ಹೆಚ್ಚು ಶೋಗಳು ದೊರೆತಿವೆ.
ಮಲ್ಟಿಪ್ಲೆಕ್ಸ್ ಎಎಂಬಿ ಸಿನಿಮಾಸ್ ನಲ್ಲಿ 600 ರಿಂದ 400 ವರೆಗೆ ಟಿಕೆಟ್ ಬೆಲೆ ಇದೆ. ಕೆಲ ಎಸಿ ಚಿತ್ರಮಂದಿರದಲ್ಲಿ 300-250-200 ಟಿಕೆಟ್ ಬೆಲೆ ಇದೆ. ‘ಪೆದ್ದಿ’ ಚಿತ್ರತಂಡ ಈ ಬಾರಿ ಅಂಥ ‘ಲೂಟಿ’ಗೆ ಮುಂದಾಗಿಲ್ಲ. ಈ ಹಿಂದೆ ಬಿಡುಗಡೆ ಆದ ಪರಭಾಷೆ ಸಿನಿಮಾಗಳಿಗೆ ಇದರ ದುಪ್ಪಟ್ಟು ಟಿಕೆಟ್ ಬೆಲೆಯನ್ನು ನಿಗದಿ ಮಾಡಲಾಗಿತ್ತು. ಜನವರಿ ತಿಂಗಳಲ್ಲಿ ‘ಜನ ನಾಯಗನ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆದಾಗ ಬೆಂಗಳೂರಿನಲ್ಲಿ ಪ್ರತಿ ಟಿಕೆಟ್ ಬೆಲೆ 900 ರಿಂದ 1000 ವರೆಗೆ ನಿಗದಿ ಪಡಿಸಲಾಗಿತ್ತು. ಸಿಂಗಲ್ ಸ್ಕ್ರೀನ್ಗಳಲ್ಲಿ 500 ರಿಂದ 600 ರೂಪಾಯಿ ಬೆಲೆ ನಿಗದಿಪಡಿಸಲಾಗಿತ್ತು.
ಬುಚ್ಚಿಬಾಬು ಸನಾ ನಿರ್ದೇಶಿಸಿರುವ ‘ಪೆದ್ದಿ’ ಸಿನಿಮಾ ಹಳ್ಳಿಯ ಕ್ರೀಡಾಪಟು ಒಬ್ಬನ ಕತೆಯನ್ನು ಒಳಗೊಂಡಿದೆ. ರಾಮ್ ಚರಣ್ ಜೊತೆಗೆ ಶಿವರಾಜ್ ಕುಮಾರ್, ಜಾನ್ಹವಿ ಕಪೂರ್, ದಿವ್ಯೇಂದು, ಬೊಮನ್ ಇರಾನಿ, ಜಗಪತಿ ಬಾಬು ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ.
——





Be the first to comment