’ಕೆಡಿ’ ಮೇಲೆ ಸೆನ್ಸಾರ್ ಪ್ರಹಾರದ ಆರೋಪ

‘ಕೆಡಿ’ ಸಿನಿಮಾ ಮೇಲೆ ಸೆನ್ಸಾರ್ ಮಂಡಳಿ ಸೇಡು ತೀರಿಸಿಕೊಳ್ಳುತ್ತಿದೆ ಎಂಬ ಆರೋಪ ಚಿತ್ರತಂಡದಿಂದ ಕೇಳಿ ಬಂದಿದೆ.

ಕನ್ನಡ ಸಿನಿಮಾಗಳಿಗೆ ಮುಂಬೈನ ಕೇಂದ್ರ ಸೆನ್ಸಾರ್ ಬೋರ್ಡ್‍ನಿಂದ ಅನ್ಯಾಯ ಆಗುತ್ತಿದೆ ಎಂದು ನಿರ್ದೇಶಕ ಪ್ರೇಮ್ ಆರೋಪ ಮಾಡಿದ್ದಾರೆ. ಕನ್ನಡ ಸಿನಿಮಾ ಎಂಬ ಕಾರಣಕ್ಕೆ ವ್ಯವಸ್ಥಿತ ರಾಜಕೀಯ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಧ್ರುವ ಸರ್ಜಾ ಅಭಿನಯದ ಕೆಡಿ ಚಿತ್ರಕ್ಕೆ ನಿಯಮ ಉಲ್ಲಂಘಿಸಿ, ನಿರ್ದೇಶಕ ನಿರ್ಮಾಣ ಸಂಸ್ಥೆ ಹಾಗೂ ಪ್ರಾದೇಶಿಕ ಸೆನ್ಸಾರ್ ಮಂಡಳಿ ಗಮನಕ್ಕೆ ತರದೇ ರಿವೈಸಿಂಗ್ ಕಮಿಟಿಗೆ ಕಳುಹಿಸಲಾಗಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಈಗಾಗಲೇ ಕೆಡಿ ಸಿನಿಮಾ ವೀಕ್ಷಿಸಿ ರಕ್ತಪಾತ ಇರುವ ಕಾರಣ ಚಿತ್ರಕ್ಕೆ ‘ಎ’ ಸರ್ಫಿಟಿಕೇಟ್ ನೀಡುವುದಾಗಿ ಹೇಳಿತ್ತು. ಹಾಡಿನ ಸಾಹಿತ್ಯ ಎರಡು ಸಾಲು ಬದಲಿಸಲು ಸೂಚನೆ ನೀಡಿತ್ತು. ಆದರೆ ಇದನ್ನು ಒಪ್ಪದ ಕೇಂದ್ರ ಸೆನ್ಸಾರ್ ಮಂಡಳಿ ಮತ್ತೆ ರಿವೈಸಿಂಗ್ ಕಮಿಟಿಗೆ ಕಳುಹಿಸಿದೆ.

‘ಚಿತ್ರಕ್ಕೆ ಸೆನ್ಸಾರ್ ಅನುಮತಿ ಸಿಗುತ್ತಿಲ್ಲ. ಮುಂಬೈನಲ್ಲಿರುವ ಪರಿಷ್ಕರಣಾ ಸಮಿತಿಗೆ ಕಳುಹಿಸಲಾಗುತ್ತಿದೆ ಎಂದು ನಮಗೆ ತಿಳಿಸಲಾಯಿತು. ನಮಗೆ ಸರಿಯಾದ ಸಂವಹನ ಮತ್ತು ಸ್ಪಷ್ಟತೆ ಇರಲಿಲ್ಲ. ನನಗಾಗಲಿ, ನಿರ್ಮಾಪಕರಿಗಾಗಲಿ, ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧಿಕಾರಿಗಳಿಗೆ ಔಪಚಾರಿಕವಾಗಿ ತಿಳಿಸಲಾಗಿಲ್ಲ. ಇದು ಹೇಗಾಗುತ್ತದೆ?’ ಎಂದು ಪ್ರೇಮ್ ಪ್ರಶ್ನಿಸಿದ್ದಾರೆ.

‘ಕನ್ನಡ ಚಿತ್ರಗಳು  ಕೊನೆ ಕ್ಷಣದ ಅಡೆತಡೆಗಳನ್ನು ಎದುರಿಸುತ್ತಿವೆ. ಇದು ಸಿನಿಮಾ ಬಿಡುಗಡೆಯನ್ನು ವಿಳಂಬಗೊಳಿಸುತ್ತಿದೆ. ಅಲ್ಲದೇ ಚಿತ್ರತಂಡದ ಮೇಲೆ ಅನಗತ್ಯ ಒತ್ತಡವನ್ನು ಬೀರುತ್ತದೆ’ ಎಂದು ಪ್ರೇಮ್ ಕೋಪ ವ್ಯಕ್ತಪಡಿಸಿದ್ದಾರೆ.

ಕೆವಿಎನ್ ಪ್ರೊಡಕ್ಷನ್ ಅವರ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರ ಈಗಾಗಲೇ ಸೆನ್ಸಾರ್ ಸಮಸ್ಯೆಯಿಂದ ಬಿಡುಗಡೆ ಅನಿಶ್ಚಿತ ಆಗಿದೆ. ಈಗ ಕೆಡಿ ಚಿತ್ರಕ್ಕೂ ಸೆನ್ಸಾರ್ ಸಮಸ್ಯೆ ಎದುರಾಗಿದೆ.
_

Be the first to comment

Leave a Reply

Your email address will not be published. Required fields are marked *

Translate »
error: Content is protected !!