ನಾನು ಕರುಣಾಕರ

‘ನಾನು ಕರುಣಾಕರ’ ಚಿತ್ರದ ಆಡಿಯೋ-ಟ್ರೈಲರ್ ಬಿಡುಗಡೆ

ನಿರ್ದೇಶಕ ಕಮ್ ನಟ ಆರ್ಯನ್ ತೇಜಸ್ ಇದೀಗ ‘ನಾನು ಕರುಣಾಕರ’ ಎಂಬ ತಂದೆ ಮಗನ ನಡುವಿನ ಬಾಂಧವ್ಯದ ಕಥೆಯನ್ನು ತೆರೆಗೆ ತರ್ತಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದ ಆರ್ಯನ್ ತೇಜಸ್ ಈ ಚಿತ್ರ ನಿರ್ದೇಶನದ ಜತೆಗೆ ನಾಯಕನ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಶಿಕ್ಷಣ ವ್ಯವಸ್ಥೆಯ ಸುತ್ತ ನಡೆಯುವ ಕಥೆ ಹೊಂದಿದ ‘ಪಾರ್ಕ್ ರೋಡ್ 100 ರೂಪಾಯಿ’ ಚಿತ್ರ ನಿರ್ದೇಶಿಸಿದ್ದ ಆರ್ಯನ್ ತೇಜಸ್, ಕೊರೊನಾಗೂ ಮೊದಲೇ ಈ ಕಥೆಯನ್ನು ರೆಡಿ ಮಾಡಿಕೊಂಡಿದ್ದರಂತೆ. ನಂತರ ಅದನ್ನು ಸ್ನೇಹಿತ ನಮನ್ ನಾರಾಯಣ್ ಅವರಿಗೆ ಹೇಳಿದಾಗ ಅವರಿಗದು ಇಷ್ಟವಾಗಿ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಕನ್ನಡಕ್ಕೊಂದು ಒಳ್ಳೆಯ ಸಿನಿಮಾ ಕೊಡಬೇಕೆಂಬ ನಿಟ್ಟಿನಲ್ಲಿ ಸ್ನೇಹಿತರಾದ ವೈಭವ್ ಸುರೇಶ್, ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಸಂತೋಷ್ ಮತ್ತು ಶ್ರೀಕಾಂತ್ ಇವರ ಜತೆ ಕೈಜೋಡಿಸಿದ್ದಾರೆ. ಈ ಚಿತ್ರದ ಟ್ರೈಲರ್ ಮತ್ತು ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.

ನಾನು ಕರುಣಾಕರ ಪ್ರತಿಯೊಬ್ಬರ ಜೀವನಕ್ಕೂ ಕನೆಕ್ಟ್ ಆಗುವಂಥ ಚಿತ್ರ. ಅಪ್ಪ ಮಗನ ಬಾಂಧವ್ಯ ಹಾಗೂ ಗಂಡ ಹೆಂಡತಿಯ ಸಂಬಂಧದ ಸುತ್ತ ನಡೆಯೋ ಕಥೆ ಇದಾಗಿದೆ. ಈಗಾಗಲೇ ತನ್ನೆಲ್ಲ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರ ಏಪ್ರಿಲ್ ೩ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.

ಪಾಪ್ ಕಾರ್ನ್ ಸಿನಿಮಾ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿರುವ ನಾನು ಕರುಣಾಕರ ಚಿತ್ರದಲ್ಲಿ ನಾಯಕನಾಗಿ ಆರ್ಯನ್ ತೇಜಸ್ ಹಾಗೂ ಅವರ ಪತ್ನಿಯಾಗಿ ಭಾರ್ಗವಿ ಎಲ್ ಎಲ್ ಬಿ ಖ್ಯಾತಿಯ ರಾಧಾ ಭಗವತಿ ಹಾಗೂ ಮಗನ ಪಾತ್ರದಲ್ಲಿ ಮಾ. ಭವೀಶ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕರಿಸುಬ್ಬು, ಎಂಕೆ ಮಠ, ಬಿ.ಎಂ. ವೆಂಕಟೇಶ, ಅಪೂರ್ವ ಸೇರಿದಂತೆ ಹಲವರು ನಟಿಸಿದ್ದಾರೆ.

ನಾನು ಕರುಣಾಕರ

ನಾಯಕ, ನಿರ್ದೇಶಕ ಆರ್ಯನ್ ತೇಜಸ್ ಮಾತನಾಡುತ್ತ ಪ್ರತಿಯೊಬ್ಬರ ಮನೆಯಲ್ಲೂ ಒಬ್ಬ ಕರುಣಾಕರ ಇರ‍್ತಾನೆ, ಮಧ್ಯಮ ವರ್ಗದ ಎಲ್ಲ ಫ್ಯಾಮಿಲಿಯಲ್ಲೂ ನಡೆವ ಕಥೆ, ಮೈಸೂರು, ಮೇಲುಕೋಟೆ, ಹಾಗೂ ಬೆಂಗಳೂರಿನ ಯಲಹಂಕ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ, ಒಬ್ಬ ಅಸಿಸ್ಟೆಂಟ್ ಡೈರೆಕ್ಟರ್ ತನ್ನ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗಲು ಎಷ್ಟೆಲ್ಲ ಕಷ್ಟ ಪಡುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ, ಕುಟುಂಬದ ಯಜಮಾನನಾಗಿ ನಾನು ನಟಿಸಿದ್ದೇನೆ ಎಂದು ಹೇಳಿದರು.

ನಾಯಕಿ ರಾಧಾ ಭಗವತಿ ಮಾತನಾಡುತ್ತ ಇದು ನನ್ನ ೫ನೇ ಚಿತ್ರ, ಮಿಡಲ್ ಕ್ಲಾಸ್ ಫ್ಯಾಮಿಲಿಯ ಗೃಹಿಣಿಯಾಗಿ ನಾನು ಕಾಣಿಸಿಕೊಂಡಿದ್ದೇನೆ, ಈ ಚಿತ್ರದಲ್ಲಿ ಅಭಿನಯಿಸುವಾಗ ನನ್ನ ಬಾಲ್ಯದ ದಿನಗಳ ನೆನಪಾಯ್ತು. ಆಕೆಗೆ ದೊಡ್ಡದಾಗಿ ಏನಾದರೂ ಮಾಡಬೇಕೆಂಬ ಆಸೆಯಿರುತ್ತೆ, ಆದರೆ ಗಂಡ, ಮಗನಿಗೋಸ್ಕರ ತನ್ನ ಕನಸನ್ನು ಬದಿಗೊತ್ತಿ ಅವರಿಗೆ ಸಪೋರ್ಟ್ ಮಾಡುತ್ತಾಳೆ ಎಂದು ವಿವರಿಸಿದರು.

ನಿರ್ಮಾಪಕ ವೈಭವ್ ಸುರೇಶ್ ಮಾತನಾಡುತ್ತ ಒಂದೊಳ್ಳೇ ಸಿನಿಮಾ ಮಾಡಬೇಕೆಂದು ತುಂಬಾ ವರ್ಷಗಳಿಂದ ಕನಸಿತ್ತು, ಅದು ಈ ಸಿನಿಮಾ ಮೂಲಕ ನನಸಾಗಿದೆ. ನಾನು ನಮನ್ ನಾರಾಯಣ ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ, ಚಿಕ್ಕ ಮಕ್ಕಳು ತಂದೆಗೆ ಹೇಗೆ ಕಷ್ಟ ಕೊಡುತ್ತಾರೆ, ಅದಕ್ಕಾಗಿ ತಂದೆ ಏನು ಮಾಡುತ್ತಾನೆ ಎಂಬುದೇ ಈ ಚಿತ್ರದ ಕಥೆ ಎಂದರು.

ಮತ್ತೊಬ್ಬ ನಿರ್ಮಾಪಕ ನಮನ್ ನಾರಾಯಣ ಮಾತನಾಡುತ್ತ ನಿರ್ದೇಶಕರು ನನಗೆ ಹಳೇ ಸ್ನೇಹಿತರು. ಅವರು ಈ ಕಥೆ ಹೇಳಿದಾಗ ನನ್ನ ತಂದೆಯ ನೆನಪಾಯಿತು,ಈ ಥರದ ಎಷ್ಟೋ ತಂದೆಯರು ಇದ್ದಾರೆ, ಅವರಿಗೆಲ್ಲ ಈ ಸಿನಿಮಾ ಅರ್ಪಣೆ, ಒಮ್ಮೆ ಭಾವನಾ ಬೆಳಗೆರೆ ಅವರೇ ಕಾಲ್‌ಮಾಡಿ ಕರೆಸಿಕೊಂಡು ಚಿತ್ರದ ಬಗ್ಗೆ ಮಾತಾಡಿ ಸಪೋರ್ಟ್ ಮಾಡುವುದಾಗಿ ಹೇಳಿದರು. ಟ್ರೈಲರ್ ಗೆ ಶ್ರೀನಗರ ಕಿಟ್ಟಿ‌ ವಾಯ್ಸ್ ಕೂಡ ನೀಡಿದ್ದಾರೆ ಎಂದರು. ಸ್ನೇಹಿತನ‌ ಪಾತ್ರ ಮಾಡಿರುವ ಲೋಕೇಶ್, ಪೇಂಟರ್ ಪಾತ್ರ ನಿರ್ವಹಿಸಿರುವ ಕರಿಸುಬ್ಬು ಚಿತ್ರದ ಬಗ್ಗೆ ಮಾತನಾಡಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!