ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಲಂಚ ಕೇಳಿಲ್ಲ ಅಥವಾ ಸ್ವೀಕರಿಸಿಲ್ಲ ಎಂದು ಐಆರ್ಎಸ್ ಅಧಿಕಾರಿ ಸಮೀರ್ ವಾಂಖೆಡೆ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಕೋಟಿ ರೂಪಾಯಿ ಲಂಚ ಬೇಡಿಕೆಯ ಆರೋಪ ಎದುರಿಸುತ್ತಿರುವ ಸಮೀರ್ ವಾಂಖೆಡೆ ಬಾಂಬೆ ಹೈಕೋರ್ಟ್ನಲ್ಲಿ ತಮ್ಮ ಪರ ವಾದ ಮಂಡಿಸಿದರು.
ವಾಂಖೆಡೆ ಪರ ಹಿರಿಯ ವಕೀಲ ಅಬಾದ್ ಪೋಂಡಾ ಸಿಬಿಐ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಮನವಿ ಮಾಡಿದರು. “ವಾಂಖೆಡೆ ಅವರು ಲಂಚ ಕೇಳಿದ್ದಾರೆ ಅಥವಾ ಪಡೆದಿದ್ದಾರೆ ಎಂಬುದಕ್ಕೆ ಯಾವುದೇ ದೃಢವಾದ ಪುರಾವೆ ಸಿಬಿಐ ಬಳಿ ಇಲ್ಲ” ಎಂದು ಅವರು ನ್ಯಾಯಪೀಠದ ಗಮನಕ್ಕೆ ತಂದರು.
2021ರ ಅಕ್ಟೋಬರ್ನಲ್ಲಿ ಕಾರ್ಡೆಲಿಯಾ ಕ್ರೂಸ್ ಹಡಗಿನ ಮೇಲೆ ಬಂದ ಮಾಹಿತಿಯ ಆಧಾರದ ಮೇಲೆ ಕಾನೂನುಬದ್ಧ ದಾಳಿ ನಡೆಸಲಾಗಿತ್ತು. ಈ ವೇಳೆ ಆರ್ಯನ್ ಖಾನ್ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ತನಿಖೆಯು ನಿಯಮಾನುಸಾರ ನಡೆದಿದ್ದು, ಯಾವುದೇ ದುರುದ್ದೇಶ ಇರಲಿಲ್ಲ ಎಂದು ವಾಂಖೆಡೆ ಪರ ಹಿರಿಯ ವಕೀಲ ಸ್ಪಷ್ಟಪಡಿಸಿದರು.
ಮೇ 11ರಂದು ಸಿಬಿಐ ದಾಖಲಿಸಿದ ಎಫ್ಐಆರ್ನಲ್ಲಿ ಆರ್ಯನ್ ಖಾನ್ ಅವರನ್ನು ಪ್ರಕರಣದಿಂದ ಪಾರು ಮಾಡಲು 25 ಕೋಟಿ ರೂಪಾಯಿ ಬೇಡಿಕೆ ಇಡಲಾಗಿತ್ತು. ಬಳಿಕ ಈ ಮೊತ್ತವನ್ನು 18 ಕೋಟಿಗೆ ಇಳಿಸಲಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ. ಈ ಪ್ರಕರಣದಲ್ಲಿ ಆಗಿನ ಎನ್ಸಿಬಿ ಅಧಿಕಾರಿಗಳು ಸೇರಿದಂತೆ ಹಲವರ ಹೆಸರು ಕೇಳಿ ಬಂದಿದೆ.
ಎನ್ಸಿಬಿಯ ವಿಶೇಷ ತನಿಖಾ ತಂಡ ನಡೆಸಿದ ಪರಿಶೀಲನೆಯಲ್ಲಿ ಆರ್ಯನ್ ಖಾನ್ ಯಾವುದೇ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿಲ್ಲ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.
—–





Be the first to comment