ರಣವೀರ್ ಸಿಂಗ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಬಗ್ಗೆ ವೀಕ್ಷಿಸಲು ಚಿತ್ರಮಂದಿರಕ್ಕೆ ಹೋಗಿ ಹಣ ಮತ್ತು ಸಮಯ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ರಮ್ಯಾ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ರಣವೀರ್ ಸಿಂಗ್ ಅಭಿನಯದ ‘ಧುರಂಧರ್2’ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಹಲವು ನಟರು ಸಿನಿಮಾದ ಮೇಕಿಂಗ್, ರಣವೀರ್ ಸಿಂಗ್ ನಟನೆಯನ್ನು ಕೊಂಡಾಡುತ್ತಿದ್ದರೆ ರಮ್ಯಾ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ.
‘ಚಿತ್ರ ಹೇಗಿದೆ ಅಂದರೆ ಆಸಕ್ತಿ ಇಲ್ಲದ ಪಠ್ಯಪುಸ್ತಕದ ಕೊನೆಯೇ ಇಲ್ಲದ ಅಧ್ಯಾಯಗಳನ್ನು ಓದಿದ ಹಾಗೆ ಅನಿಸುತ್ತದೆ. ಈ ಚಿತ್ರ ವೀಕ್ಷಿಸುವಾಗ ನಿಮ್ಮ ಮಿದುಳು ಕೆಲಸ ಮಾಡುವುದನ್ನು ನಿಲ್ಲಿಸಬಹುದು. ವೀಕ್ಷಕರು ಚಿತ್ರಮಂದಿರಕ್ಕೆ ಹೋಗಿ ಹಣ ವ್ಯರ್ಥ ಮಾಡಿಕೊಳ್ಳುವುದಕ್ಕಿಂತ ಸ್ವಲ್ಪ ದಿನ ಕಾದು OTT ಯಲ್ಲಿ ಚಿತ್ರ ವೀಕ್ಷಿಸುವುದು ಉತ್ತಮ. ಚಿತ್ರಮಂದಿರದಲ್ಲಿ ಹೇಗೆ ತಾಳ್ಮೆಯ ಪರೀಕ್ಷೆ ಮಾಡಬೇಕು ಎಂಬುದಕ್ಕೆ ಈ ಚಿತ್ರ ಉತ್ತಮ ಉದಾಹರಣೆ’ ಎಂದಿದ್ದಾರೆ ರಮ್ಯಾ.
‘ಸಿನಿಮಾದಲ್ಲಿ ಹಿಂಸೆ ವಿಜೃಂಭಿಸಿದೆ. ಕೈಗೆ ಸಿಕ್ಕ ಪ್ರತಿಯೊಂದು ವಸ್ತುವನ್ನು ಹೇಗೆ ಮಾರಕಾಸ್ತ್ರವಾಗಿ ಬಳಸಿ ಹಿಂಸೆ ಮಾಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಆ ದೃಶ್ಯಗಳನ್ನು ನೋಡಿ ಆಘಾತವಾಗುವ ಬದಲು ನಗು ಬರುತ್ತದೆ. ನಿರ್ದೇಶನ, ಸಂಭಾಷಣೆ, ಎಡಿಟಿಂಗ್, ಹಿನ್ನೆಲೆ ಸಂಗೀತ ಪರಿಪೂರ್ಣ ಆಗಿಲ್ಲ. ಮಾರ್ಚ್ 19 ರಂದು ತರಾತುರಿಯಲ್ಲಿ ನಿರ್ದೇಶಕರು ಈ ಚಿತ್ರವನ್ನು ಬಿಡುಗಡೆ ಮಾಡಿದ್ದು ಯಾಕೆ?’ ಎಂದು ಪ್ರಶ್ನಿಸಿದ್ದಾರೆ.
ತೆಲುಗಿನ ಖ್ಯಾತ ನಟರಾದ ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ಪ್ರಭಾಸ್ ನಿನ್ನೆ ಬಿಡುಗಡೆಯಾದ ‘ಧುರಂಧರ್2’ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
—-





Be the first to comment