ಚಿತ್ರ: ಮಾರ್ನಮಿ
ನಿರ್ದೇಶಕ: ರಿಷಿತ್ ಶೆಟ್ಟಿ
ನಿರ್ಮಾಣ: ಶಿಲ್ಪಾ ನಿಶಾಂತ್ ಮತ್ತು ನಿಶಾಂತ್ ಮುನಿಸ್ವಾಮಯ್ಯ
ತಾರಾಗಣ: ರಿತ್ವಿಕ್ ಮಠದ್, ಚೈತ್ರಾ ಜೆ ಆಚಾರ್ ಮುಂತಾದವರು…
ರೇಟಿಂಗ್: 3.5/5
ಮಂಗಳೂರಿನ ಹಬ್ಬ ಮಾರ್ನಮಿ. ಹಬ್ಬದ ಆಚರಣೆಗಳ ಮಧ್ಯೆ ಹಬ್ಬುವ ದ್ವೇಷದ ಕಿಡಿಯೊಂದು ಏನೆಲ್ಲ ಘಟನೆಗಳಿಗೆ ಕಾರಣವಾಗುತ್ತದೆ ಎಂದು ಸಾರುವ ಚಿತ್ರವೇ ಮಾರ್ನಮಿ.
ಮಂಗಳೂರಿನಲ್ಲಿ ಮಾರ್ನಮಿ ಹಬ್ಬಕ್ಕೆ ಹುಲಿವೇಷ ಇರಲೇಬೇಕು. ಈ ಚಿತ್ರದಲ್ಲಿ ಖುದ್ದು ನಾಯಕನೇ ಹುಲಿವೇಷ ಹಾಕುತ್ತಾನೆ. ಅದಕ್ಕೆ ಬಾಲ್ಯದಲ್ಲಿ ಆತನ ತಾಯಿ ಹೇಳಿಕೊಂಡ ಹರಕೆಯೇ ಕಾರಣ. ಆದರೆ ಈ ವೇಷ ಮುಂದೆ ಮನುಷ್ಯರೊಳಗಿನ ಬಣ್ಣವನ್ನೇ ಹೊರಗೆ ತರುತ್ತದೆ. ಚಿತ್ರದಲ್ಲಿ ನಾಯಕನ ಹೆಸರು ಬೆಂಗ್ರೆಯ ಚೇತು. ಈತ ತಂದೆ ತಾಯಿಯನ್ನು ಕಳೆದುಕೊಂಡು ಅನಾಥನಾಗಿ ಬೆಳೆದವನು. ಮಕ್ಕಳೇ ಇರದ ಅತ್ತೆ ಮಾವ ಇಬ್ಬರೂ ಚೇತುವನ್ನು ಸ್ವಂತ ಮಗನಂತೆ ಬೆಳೆಸಿದವರು. ಆದರೆ ಘಟನೆಯೊಂದು ಚೇತುವನ್ನು ಆಯುಧ ಕೈಗೆ ತೆಗೆದುಕೊಳ್ಳುವಂತೆ ಮಾಡುತ್ತದೆ. ಆ ಸಂದರ್ಭ ಯಾವುದು? ಮುಂದೇನಾಗುತ್ತದೆ ಎನ್ನುವುದನ್ನು ನಿರ್ದೇಶಕ ರಿಷಿತ್ ಶೆಟ್ಟಿ ಆಕರ್ಷಕವಾಗಿ ಕಟ್ಟಿಕೊಟ್ಟಿದ್ದಾರೆ.
ಚಿತ್ರದಲ್ಲಿ ಚೇತುವನ್ನು ಪ್ರೀತಿಸಿ ಬೆನ್ನು ಬೀಳುವ ದೀಕ್ಷಾ ಎನ್ನುವ ಯುವತಿ ಇದ್ದಾಳೆ. ಇವರಿಬ್ಬರ ವಿವಾಹವೂ ನಡೆಯುತ್ತದೆ. ಆದರೆ ಆನಂತರದ ಘಟನಾವಳಿಗಳು ಮಾತ್ರ ಕಥೆಯಲ್ಲಿ ನಿಜವಾದ ತಿರುವುಗಳನ್ನು ತರುತ್ತವೆ.
ಬೆಂಗ್ರೆಯ ಚೇತುವಾಗಿ ಕಿರುತೆರೆ ಖ್ಯಾತಿಯ ರಿತ್ವಿಕ್ ಮಠದ್ ಕಾಣಿಸಿದ್ದಾರೆ. ಇವರು ಮಂಗಳೂರು ಕನ್ನಡ ಮಾತನಾಡಿ ನಟಿಸಿರುವ ರೀತಿ ಗಮನಿಸಿದರೆ ತುಳುನಾಡಿನ ಕಲಾವಿದರಿಗೇನೇ ಚಾಲೆಂಜ್ ನೀಡುವ ಹಾಗಿದೆ. ರಿತ್ವಿಕ್ ಗೆ ಇಲ್ಲಿ ವೈವಿಧ್ಯಮಯ ನಟನೆಗೆ ಅವಕಾಶ ಸಿಕ್ಕಿದೆ. ಒಂದು ಕಡೆ ಫ್ಯಾಮಿಲಿ ಹೀರೋ ಇಮೇಜ್ ಮತ್ತೊಂದೆಡೆ ರೌಡಿಸಂ ಆ್ಯಕ್ಷನ್ ಹೀಗೆ ಎರಡು ಕಡೆಗೂ ನ್ಯಾಯ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಚೇತುವಿನ ಪ್ರೇಯಸಿಯಾಗಿ ಮತ್ತು ಮಡದಿಯಾಗಿ ಚೈತ್ರಾ ಜೆ ಆಚಾರ್ ಅಭಿನಯಿಸಿದ್ದಾರೆ. ಎರಡೂ ಶೇಡ್ ನಲ್ಲಿ ಚೈತ್ರಾ ನೀಡಿರುವ ಬದಲಾವಣೆಯ ಅಭಿನಯ ಮೈ ರೋಮಾಂಚನಗೊಳಿಸುತ್ತದೆ. ಮಾರ್ನಮಿಯಲ್ಲಿ ಮತ್ತೊಂದು ಪ್ರಧಾನ ಪಾತ್ರವನ್ನು ಸುಮನ್ ತಲ್ವಾರ್ ನಿರ್ವಹಿಸಿದ್ದಾರೆ. ಮಂಗಳೂರಿನಲ್ಲಿ ಹುಲಿ ಕುಣಿತ ಆಯೋಜಿಸುವ ಯಜಮಾನ ದಿವಾಕರಣ್ಣನ ಪಾತ್ರಕ್ಕೆ ತೂಕ ನೀಡುವಂತೆ ಸುಮನ್ ಕಾಣಿಸಿದ್ದಾರೆ. ಬೆಕ್ಕಿನ ಕಣ್ಣುಗಳ ಖಳನಾಗಿ ಜ್ಯೋತಿಷ್ ಶೆಟ್ಟಿ ಭಯ ಮೂಡಿಸುತ್ತಾರೆ.
ನಾಯಕನ ಸಾಕುತಂದೆಯಾಗಿ ಸೆಂಟಿಮೆಂಟ್ ಮತ್ತು ಜತೆಯಲ್ಲೇ ಮನರಂಜನಾತ್ಮಕ ನಟನೆ ನೀಡುವಲ್ಲಿ ತುಳು ರಂಗಭೂಮಿಯ ಜನಪ್ರಿಯ ನಟಿ ಚೈತ್ರಾ ಶೆಟ್ಟಿ ಮತ್ತು ನಟ ಪ್ರಕಾಶ್ ತೂಮಿನಾಡ್ ಗೆದ್ದಿದ್ದಾರೆ. ಬಾಲ್ಯದಲ್ಲಿ ನಾಯಕನಿಗೆ ಮುದ್ದಿನ ತಾಯಿಯಾಗಿ ಪ್ರೇಮನಿಧಿಯಾಗಿ ಸೋನುಗೌಡ ಅಭಿನಯಿಸಿದ್ದಾರೆ.
ಮಂಗಳೂರು ಕರಾವಳಿಯ ಸಿನಿಮಾಗಳೆಂದರೆ ಬರೀ ಬ್ಯಾವರ್ಸಿ ಪದಗಳಷ್ಟೇ ಅಲ್ಲ. ಸಾಕಷ್ಟು ಸಾಂಸ್ಕೃತಿಕ ವೈವಿಧ್ಯತೆಗಳು ತುಂಬಿವೆ ಎನ್ನುವುದನ್ನು ನಿರ್ದೇಶಕ ರಿಷಿತ್ ಶೆಟ್ಟಿ ಈ ಚಿತ್ರದ ಮೂಲಕ ಸಾಬೀತು ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರದ ಹಬ್ಬ, ನೋವು, ನಲಿವಿನ ಸಂದರ್ಭಗಳಿಗೆ ಕನ್ನಡಿ ಹಿಡಿಯುವಂತಿದೆ. ಶಿವ ಸೇನಾ ಛಾಯಾಗ್ರಹಣ ಚಿತ್ರದ ದೃಶ್ಯಗಳನ್ನು ಮನದೊಳಗೆ ಸೇರಿಕೊಳ್ಳುವಂತೆ ಮಾಡಿವೆ. ಈ ವರ್ಷ ಬಿಡುಗಡೆಯಾದ ಚಿತ್ರಗಳಲ್ಲೇ ವಿಭಿನ್ನ ಸ್ಥಾನ ಪಡೆಯುವ ಮಾರ್ನಮಿ ಸಿನಿಮಾ ಪ್ರಿಯರು ನೋಡಲೇಬೇಕಾದ ಚಿತ್ರ.





Be the first to comment