ಬಿಗ್ ಬಾಸ್ ಕನ್ನಡ ಸೀಸನ್ 7’ರ ವಿಜೇತ ಶೈನ್ ಶೆಟ್ಟಿ ‘ಶಂಕರಾಭರಣ’ ಸಿನಿಮಾದಲ್ಲಿ ಬಸ್ ಚಾಲಕರಾಗಿ ಕಾಣಿಸಿಕೊಂಡಿದ್ದಾರೆ.
‘ರಂಗಸ್ಥಳ ಸ್ಟುಡಿಯೋಸ್’ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಶೈನ್ ಶೆಟ್ಟಿ ಹಾಗೂ ದಿವಾಕರ್ ಶೆಟ್ಟಿ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ‘ಶಂಕರಾಭರಣ’ ಶೀರ್ಷಿಕೆಯಿಂದಲೇ ಹೊಸ ಸಿನಿಮಾ ಅಭಿಮಾನಿಗಳ ಗಮನ ಸೆಳೆದಿದ್ದು, ಇತ್ತೀಚೆಗೆ ಬಿಡುಗಡೆಗೊಂಡ ಮೋಷನ್ ಪೋಸ್ಟರ್ ಕುತೂಹಲ ಹೆಚ್ಚಿಸಿದೆ.
ಚಿತ್ರತಂಡದ ಮಾಹಿತಿ ಪ್ರಕಾರ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ಕರಾವಳಿ ಭಾಗದ ನೆಲೆಯಲ್ಲೇ ಕಥೆ ಸಾಗಲಿದೆ. ಹಳ್ಳಿಯ ಹೊಸ ಮಾರ್ಗಕ್ಕೆ ನಿಯೋಜನೆಗೊಂಡ ಬಸ್ ಚಾಲಕನ ಜೀವನದಲ್ಲಿ ಸಂಭವಿಸುವ ಘಟನೆಗಳೇ ಚಿತ್ರದ ಮುಖ್ಯ ಅಂಶವಾಗಿವೆ.
‘ಮಿಥ್ಯ’ ಸಿನಿಮಾದ ಮೂಲಕ ಗಮನ ಸೆಳೆದ ನಿರ್ದೇಶಕ ಸುಮಂತ್ ‘ಶಂಕರಾಭರಣ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅವರು ‘ಶಂಕರಾಭರಣ’ದಲ್ಲೂ ಹೊಸ ರೀತಿಯ ನಿರೂಪಣೆ ಮಾಡುವ ನಿರೀಕ್ಷೆ ಮೂಡಿಸಿದ್ದಾರೆ.
ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದು, ಉದಿತ್ ಖುರಾನಾ ಅವರ ಛಾಯಾಗ್ರಹಣವಿದೆ.
‘ಒಂದು ಮೊಟ್ಟೆಯ ಕಥೆ’, ‘ಕಾಂತಾರ’, ‘ಜೇಮ್ಸ್’ ಸಿನಿಮಾಗಳ ನಂತರ ಶೈನ್ ಶೆಟ್ಟಿ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ರಂಗಸ್ಥಳ ಸ್ಟುಡಿಯೋಸ್ ಮೂಲಕ ನೈಜ ಕಥೆಗಳನ್ನು ಹೇಳುವುದೇ ನಮ್ಮ ಉದ್ದೇಶ” ಎಂದು ನಿರ್ಮಾಪಕರಾದ ಶೈನ್ ಶೆಟ್ಟಿ ಹಾಗೂ ದಿವಾಕರ್ ಶೆಟ್ಟಿ ತಿಳಿಸಿದ್ದಾರೆ.
—–





Be the first to comment