ನೆನಪುಗಳ ಮಾತು ಮಧುರ

Movie Review: ದಾರಿ ತಪ್ಪಿ‌‌ ಬಂದವರು ಸಾರಿದ ಸಂದೇಶ!

ಚಿತ್ರ: ನೆನಪುಗಳ ಮಾತು ಮಧುರ
ನಿರ್ದೇಶನ: ಅಫ್ಜಲ್ ಸೂಪರ್ ಸ್ಟಾರ್ಸ್
ನಿರ್ಮಾಣ: 7 ರಾಜ್
ತಾರಾಗಣ: ಅಫ್ಜಲ್, ಸೆವೆನ್ ರಾಜ್ ಮೊದಲಾದವರು…
ರೇಟಿಂಗ್ : 3.5/5

ಮನುಷ್ಯ ತನ್ನ ಅನುಭವಗಳಿಂದ‌‌ ಪಾಠ ಕಲಿಯುತ್ತಾನೆ. ಎಷ್ಟು ಬೇಗ ತನ್ನ ದಾರಿ ತಪ್ಪು ಎಂದು ಅರ್ಥ ಮಾಡಿಕೊಂಡು ತಿದ್ದಿಕೊಳ್ಳುತ್ತಾನೆಯೋ‌ ಅಷ್ಟೇ ಬೇಗ ಬದುಕು ಸರಿ‌ಹೋಗುತ್ತದೆ. ಇದೇ ರೀತಿ ಒಂದು ಕಾಲದಲ್ಲಿ ಹಳಿತಪ್ಪಿದ ದಾರಿಯಲ್ಲಿದ್ದ ಸ್ನೇಹಿತರು ತಮ್ಮ ಅಂದಿನ ಅನುಭವಗಳನ್ನು ಹಂಚಿಕೊಳ್ಳುವ ಕಥೆಯೇ ‘ನೆನಪುಗಳ ಮಾತು ಮಧುರ’ದ ಹೂರಣ.

ನಾಲ್ವರು ಆತ್ಮೀಯರು ಬಹಳ‌ ಕಾಲದ‌ ಬಳಿಕ ರೆಸಾರ್ಟ್ ಒಂದರಲ್ಲಿ ಭೇಟಿಯಾಗುತ್ತಾರೆ. ಅಲ್ಲಿ ಸೇರುವ ನಾಲ್ಕು ಮಂದಿಯ ಕಥೆ ಕೂಡ ನಾಲ್ಕು ರೀತಿಯಲ್ಲಿರುತ್ತದೆ. ನಾಲ್ಕು ಕಥೆಗಳು ಕೂಡ ಬೇರೆ ಬೇರೆಯಾಗಿರುವ ಕಾರಣ ಚಿತ್ರ ನೋಡುವ ಪ್ರೇಕ್ಷಕರಿಗೆ ವೈವಿಧ್ಯಮಯ ಅನುಭವ ನೀಡುತ್ತದೆ. ಮಾತ್ರವಲ್ಲ ನಾಲ್ಕರಲ್ಲಿಯೂ ಹೆಣ್ಣು ಗಂಡು ಸಂಬಂಧದ ಬಗ್ಗೆಯೂ ಉಲ್ಲೇಖ‌ ಇರುವ ಕಾರಣ ರಸಿಕ ಪ್ರೇಕ್ಷಕರಿಗೆ ರಸನಿಮಿಷಗಳೆಂದೇ ಹೇಳಬಹುದು.‌

ಸಾಲ ಕೊಟ್ಟ ವ್ಯಕ್ತಿಯು ತನ್ನ ಪತ್ನಿಯನ್ನೇ ಬಯಸಿದಾಗ ಆತ ಮಾಡುವ ತಂತ್ರಗಾರಿಕೆ‌ ಏನು? ಕೊಲೆ ಪ್ರಕರಣದಲ್ಲಿ ಸಿಲುಕಬೇಕಾದವನು ಪಾರಾಗಿದ್ದು ಹೇಗೆ? ಕೊನೆಯ ಸ್ನೇಹಿತನ ಕಥೆ ಉಳಿದವರ ಬದುಕಿಗೆ ಸಂಬಂಧಿಸಿದಂತೆ ಮಾಡುವ ಟ್ವಿಸ್ಟ್ ಯಾವುದು ಎನ್ನುವುದೇ ಈ ಚಿತ್ರದ ಆಕರ್ಷಕ ಅಂಶ.

ಮೊದಲ‌ ಬಾರಿ ಆ್ಯಕ್ಷನ್ ಕಟ್ ಹೇಳಿರುವ ಅಫ್ಜಲ್ ಅವರು ಪ್ರಥಮ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಪ್ರಮುಖ‌ ಪಾತ್ರವನ್ನು ನಿಭಾಯಿಸಿದ್ದಾರೆ. ಸ್ವಾಮಿ ಮೈಸೂರು ಛಾಯಾಗ್ರಹಣ ಆಕರ್ಷಕ ಫ್ರೇಮ್ ಒದಗಿಸಿವೆ. ಅಂಜಲಿ, ಸೌಮ್ಯಾ, ರೇಖಾ‌ ರಮೇಶ್, ಶುಭ ತೀರ್ಥ ಮೊದಲಾದ ನಟಿಯರಿಗೆ ಗ್ಲಾಮರ್ ಜತೆಗೆ ನಟನೆಗೂ ಆದ್ಯತೆ ಇರುವ ಪಾತ್ರಗಳು ಲಭಿಸಿವೆ.

ಚಿತ್ರದ ನಿರ್ಮಾಪಕ‌ ಸೆವೆನ್ ರಾಜ್ ಅವರು ಕುಬೇರಪ್ಪ ಎನ್ನುವ ರೆಸಾರ್ಟ್ ಮಾಲೀಕನ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರಕ್ಕೂ ಎರಡು ಶೇಡ್ಸ್ ಇವೆ.ರಾಜು ಎಮ್ಮಿಗನೂರು ಸಂಗೀತದಲ್ಲಿನ ಹಾಡುಗಳು ಮನಮೋಹಕವಾಗಿವೆ. ಮನರಂಜನೆಗೆ ಆದ್ಯತೆ ನೀಡಿ‌ ಸಿನಿಮಾ ನೋಡುವವರು ಖಂಡಿತವಾಗಿಯೂ ವೀಕ್ಷಿಸಬಹುದಾದ ಚಿತ್ರ ಇದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!