ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಅವರನ್ನು ಜೈಲು ನಿಯಮಗಳನ್ನು ಉಲ್ಲಂಘಿಸಿ ನೋಡಲು ಅವಕಾಶ ಮಾಡಿಕೊಟ್ಟ ಪ್ರಕರಣದಲ್ಲಿ ವಾರ್ಡನ್ ಅವರನ್ನು ಚಾಮರಾಜನಗರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ.
ಯಲಹಂಕ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ನಿಯಮಬಾಹಿರವಾಗಿ ದರ್ಶನ್ ಅವರನ್ನು ಭೇಟಿ ಮಾಡಿದ ಪ್ರಕರಣ ಸಿಸಿಟಿವಿ ಪರಿಶೀಲನೆಯ ವೇಳೆ ಪತ್ತೆಯಾಗಿದೆ. ಕರ್ತವ್ಯಲೋಪದ ಹಿನ್ನೆಲೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮ ಕೈಗೊಂಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ವಾರ್ಡನ್ ಪ್ರಭುಶಂಕರ ಚೌಹಾಣ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಜೊತೆಗೆ ತನಿಖೆಗೆ ಆದೇಶಿಸಲಾಗಿದೆ.
ಜ. 24ರಂದು ಯಲಹಂಕ ಠಾಣೆಯ ಕಾನ್ಸ್‌ಟೇಬಲ್ ಗಣೇಶ್ ಬೇರೊಂದು ಪ್ರಕರಣದ ಆರೋಪಿಗಳನ್ನು ಜೈಲಿಗೆ ಬಿಡಲು ಪರಪ್ಪನ ಅಗ್ರಹಾರಕ್ಕೆ ಬಂದಿದ್ದರು. ಈ ವೇಳೆ ಅವರು ಜೈಲು ಸಿಬ್ಬಂದಿಯನ್ನು ಸಂಪರ್ಕಿಸಿ ದರ್ಶನ್ ಅವರನ್ನು ನೋಡಬೇಕೆಂದು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ವಾರ್ಡನ್ ಪ್ರಭುಶಂಕರ ಚೌಹಾಣ್ ಸಿಸಿಟಿವಿ ಕ್ಯಾಮರಾ ಕಣ್ಣಿಗೆ ಬೀಳದಂತೆ ಗಣೇಶ್ ಅವರನ್ನು ದರ್ಶನ್ ಇದ್ದ ಬ್ಯಾರಕ್ ಬಳಿ ಕರೆದೊಯ್ದಿದ್ದರು.
ಡಿಜಿಪಿ ಅಲೋಕ್ ಕುಮಾರ್ ತಮ್ಮ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸುವ ವೇಳೆ ಈ ಅಕ್ರಮ ಬೆಳಕಿಗೆ ಬಂದಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜೈಲಿಗೆ ಭೇಟಿ ನೀಡಿ ದರ್ಶನ್ ಬಳಿ ಈ ಕುರಿತು ವಿಚಾರಿಸಿದಾಗ, “ಪರಿಚಯವಿಲ್ಲದವರು ಬಂದು ಹಾಯ್ ಹೇಳಿದರು” ಎಂಬ ಉತ್ತರ ಸಿಕ್ಕಿದೆ. ಬಳಿಕ ವಾರ್ಡನ್ ನ್ನು ವಿಚಾರಿಸಿದಾಗ ಸತ್ಯ ಬಹಿರಂಗವಾಗಿದೆ.
ಪ್ರಕರಣದಲ್ಲಿ ದರ್ಶನ್ ನೋಡಲು ಹೋಗಿದ್ದ ಪೊಲೀಸ್ ಪೇದೆ ವಿರುದ್ಧವೂ ಶಿಸ್ತು ಕ್ರಮ ಜರುಗಿಸುವಂತೆ ಈಶಾನ್ಯ ವಿಭಾಗದ ಡಿಸಿಪಿಗೆ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.
—–





Be the first to comment