ಚಿತ್ರ: ವಿಕಲ್ಪ
ನಿರ್ದೇಶನ: ಪೃಥ್ವಿರಾಜ್ ಪಾಟೀಲ್
ನಿರ್ಮಾಣ: ಇಂದಿರಾ ಶಿವಸ್ವಾಮಿ
ತಾರಾಗಣ: ಪೃಥ್ವಿರಾಜ್ ಪಾಟೀಲ್, ನಾಗಶ್ರೀ ಹೆಬ್ಬಾರ್
ರೇಟಿಂಗ್ : 3.5/5
ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್. ಈ ಚಿತ್ರದ ನಾಯಕನೇ ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸುತ್ತಿರುತ್ತಾನೆ. ಅಂಥ ಪರಿಸ್ಥಿತಿಯಲ್ಲಿದ್ದು ಕೂಡ ಹೇಗೆ ಈ ಕಥೆಗೆ ನಾಯಕನಾಗುತ್ತಾನೆ ಎನ್ನುವುದೇ ಚಿತ್ರದ ವಿಶೇಷತೆ.
ಐಟಿ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಪೃಥ್ವಿ ಎನ್ನುವ ವ್ಯಕ್ತಿಯ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಆತನ ಮನಸಿನಲ್ಲಿ ಆಗಾಗ ಒಂದಷ್ಟು ಪಾತ್ರಗಳು ಬಂದು ಕಾಡುತ್ತಿರುತ್ತವೆ. ಅವುಗಳ ಹಿನ್ನೆಲೆಯನ್ನು ಹುಡುಕಿದಾಗ ಮೂರು ತಿಂಗಳ ಹಿಂದೆ ಹಳ್ಳಿಯ ಊರಿಗೆ ಹೋದಾಗ ನಡೆದ ಘಟನೆಗಳು ಮತ್ತು ಬಾಲ್ಯದ ನೆನಪುಗಳು ಕೂಡ ಸೇರಿಕೊಂಡಿರುವುದು ಅರಿವಾಗುತ್ತದೆ. ಇದೇ ಸಂದರ್ಭದಲ್ಲಿ ಪೃಥ್ವಿಯ ಬಾಳಿಗೆ ಸಮುದ್ಯತಾ ಎನ್ನುವ ಯುವತಿಯ ಪ್ರವೇಶವಾಗುತ್ತದೆ. ಪೃಥ್ವಿಯನ್ನು ಮಾನಸಿಕ ಸಂಘರ್ಷದಿಂದ ಹೊರಗೆ ತರಲು ಪ್ರಯತ್ನಿಸುವ ಸಮುದ್ಯತಾ ಕೂಡ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆಯುವುದೇಕೆ? ಸಮುದ್ಯತಾ ಹಿನ್ನೆಲೆ ಏನು? ಇವರಿಬ್ಬರ ಮಧ್ಯೆ ಅಂತರ ಸೃಷ್ಟಿಯಾಗುವುದೇಕೆ? ಕೊನೆಯಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಸಿಗುವ ಪರಿಹಾರವಾದರೂ ಏನು? ಮೊದಲಾದ ಪ್ರಶ್ನೆಗಳಿಗೆ ‘ವಿಕಲ್ಪ’ದಲ್ಲಿ ಉತ್ತರವಿದೆ.
ಚಿತ್ರದಲ್ಲಿ ಪೃಥ್ವಿ ಪಾತ್ರವನ್ನು ಖುದ್ದಾಗಿ ನಿರ್ದೇಶಕರೇ ನಿರ್ವಹಿಸಿದ್ದಾರೆ. ಸಾಮಾನ್ಯವಾಗಿ ಹೊಸ ಪ್ರತಿಭೆಗಳು ಎರಡೆರಡು ಜವಾಬ್ದಾರಿ ಹೊತ್ತರೆ ಚಿತ್ರ ಚೆನ್ನಾಗಿ ಮೂಡಿಬರುವುದು ಕಷ್ಟ. ಆದರೆ ಪೃಥ್ವಿ ಅದನ್ನು ಸುಳ್ಳು ಮಾಡಿದ್ದಾರೆ. ಮೊದಲ ಚಿತ್ರದಲ್ಲೇ ಅದ್ಭುತ ಅಭಿನಯದೊಂದಿಗೆ ಆಕರ್ಷಕ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಅಭಿರಾಮ್ ಗೌಡ ಛಾಯಾಗ್ರಹಣದಲ್ಲಿ ಪ್ರತಿ ಫ್ರೇಮ್ ಕೂಡ ಮಾತನಾಡುವಂತಿದೆ. ಪೃಥ್ವಿಗೆ ಜೋಡಿಯಾಗಿ ಸಮುದ್ಯತಾ ಅದ್ಭುತ ಅಭಿನಯ ನೀಡಿದ್ದಾರೆ.
ಐ.ಟಿಯಲ್ಲಿ ಕೆಲಸ ಮಾಡುವ ಯುವಕನ ಕಥೆಯಾದರೂ ನಗರಗಳಿಗಿಂತಲೂ ಹಳ್ಳಿಹಿನ್ನೆಲೆಯ ದೃಶ್ಯಗಳಿಂದಲೇ ಮನೋಹರಗೊಳಿಸಲಾಗಿದೆ. ಪ್ರತಿ ಫ್ರೇಮ್ ನಲ್ಲಿ ಹಸಿರು ಸಿರಿ ಮನಸೆಳೆಯುತ್ತದೆ. ಸಂವತ್ಸರ ಎನ್ನುವ ನವ ಸಂಗೀತ ನಿರ್ದೇಶಕ ಹಾಡುಗಳನ್ನು ಮನಮೋಹಕಗೊಳಿಸಿದ್ದಾರೆ. ಹಾಡಿನ ಸಾಹಿತ್ಯದಲ್ಲಿಯೂ ಹೊಸತನದ ಅನುಭವ ಸಿಗುತ್ತದೆ.
ನಾಯಕಿ ಮಾತ್ರವಲ್ಲದೆ ಪ್ರತಿಯೊಂದು ಪಾತ್ರಗಳಿಂದಲೂ ಕಥೆಗೆ ತಕ್ಕಂತೆ ಅಭಿನಯ ತೆಗೆಸಿರುವುದು ನಿರ್ದೇಶಕರ ಗರಿಮೆ. ಸಂಭಾಷಣೆಗಳು ಕೂಡ ಚುರುಕು ಮುಟ್ಟಿಸುವಂತಿದೆ. ಸಹಜವಾದ ಹಿನ್ನೆಲೆಯಲ್ಲಿ ಮನೋವೈಜ್ಞಾನಿಕ ಕಥೆಯನ್ನು ರಂಜನೀಯವಾಗಿ ಹೇಳಿರುವ ನಿರ್ದೇಶಕರ ಪ್ರಯತ್ನವನ್ನು ಮೆಚ್ಚಲೇಬೇಕಾಗಿದೆ.





Be the first to comment