ಉಪೇಂದ್ರ, ರಮ್ಯಾ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ರಕ್ತ ಕಾಶ್ಮೀರ’ ಸಿನಿಮಾ ಜನವರಿ 30ರಂದು ಬಿಡುಗಡೆ ಆಗಲಿದೆ.
ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ರಕ್ತ ಕಾಶ್ಮೀರ’ ಸಿನಿಮಾದ ಶೂಟಿಂಗ್ ಒಂದಷ್ಟು ವರ್ಷಗಳ ಹಿಂದೆಯೇ ನಡೆದಿತ್ತು. ಆದರೆ ಕಾರಣಾಂತರಗಳಿಂದ ಚಿತ್ರದ ಕೆಲಸಗಳು ಪೂರ್ಣಗೊಳ್ಳುವುದು ತಡವಾಗಿತ್ತು.
ಮಾರ್ಸ್ ಸುರೇಶ್ ಅವರು ‘ರಕ್ತ ಕಾಶ್ಮೀರ’ ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ದೇಶಭಕ್ತಿ ಕಥಾಹಂದರ ಇದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಕಥಾಹಂದರವನ್ನು ಸಿನಿಮಾ ಹೊಂದಿದೆ. ಪಾಕ್ ಉಗ್ರಗಾಮಿಗಳು ಕಾಶ್ಮೀರ ಅಲ್ಲದೇ, ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಲ್ಲೂ ದಾಳಿ ನಡೆಸಿ ಸಾವಿರಾರು ಜನರನ್ನು ಹತ್ಯೆ ಮಾಡಿರುತ್ತಾರೆ. ಇದರಿಂದ ನೊಂದ ಚಿತ್ರದ ನಾಯಕ ಮತ್ತು ನಾಯಕಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿ ಅಲ್ಲಿರುವ ಉಗ್ರರನ್ನು ಮಟ್ಟಹಾಕುವ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗುತ್ತದೆ.
‘ಎಂಡಿಎಂ ಪ್ರೊಡಕ್ಷನ್ಸ್’ ಮೂಲಕ ಸಿನಿಮಾದ ನಿರ್ಮಾಣ ಆಗಿದೆ. ಮುಖೇಶ್ ರಿಶಿ, ದೊಡ್ಡಣ್ಣ, ಓಂ ಪ್ರಕಾಶ್ ರಾವ್, ತೆಲುಗು ನಟಿ ಅನಿಲ, ಕುರಿ ಪ್ರತಾಪ್ ಮುಂತಾದವರು ಸಿನಿಮಾದಲ್ಲಿ ಇದ್ದಾರೆ.
ಈ ಸಿನಿಮಾದ 18 ನಿಮಿಷಗಳ ವಿಶೇಷ ಹಾಡಿನಲ್ಲಿ ಕನ್ನಡದ ದಿಗ್ಗಜ ನಟರಾದ ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ಕುಮಾರ್, ಶ್ರೀನಾಥ್, ದರ್ಶನ್, ಪುನೀತ್ ರಾಜ್ಕುಮಾರ್, ಜಗ್ಗೇಶ್, ರಮೇಶ್ ಅರವಿಂದ್, ಉಪೇಂದ್ರ, ಜೈ ಜಗದೀಶ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಇದು ಯಾರೂ ಮಾಡಿರದ ದಾಖಲೆ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.
ಗುರುಕಿರಣ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ದೇಶಪ್ರೇಮ ಸಾರುವ ಈ ಚಿತ್ರ ಕುಟುಂಬ ಸಮೇತ ನೋಡುವಂತಿದೆ ಎಂದು ಚಿತ್ರತಂಡ ಹೇಳಿದೆ.
—–





Be the first to comment