ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕಳೆದ 8 ವರ್ಷಗಳಿಂದ ಬಾಲಿವುಡ್ನಲ್ಲಿ ತಮಗೆ ಅವಕಾಶಗಳು ಕಡಿಮೆಯಾಗಿವೆ ಎಂದು ಹೇಳಿದ್ದಾರೆ.
ರೆಹಮಾನ್ ನೀಡಿದ ಹೇಳಿಕೆ ಬಾಲಿವುಡ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬಿಬಿಸಿ ಏಷ್ಯನ್ ನೆಟ್ವರ್ಕ್ ಸಂದರ್ಶನದಲ್ಲಿ ಮಾತನಾಡಿರುವ ರೆಹಮಾನ್, ಬಾಲಿವುಡ್ನಲ್ಲಿ ಅವಕಾಶ ಇಲ್ಲದಕ್ಕೆ ಕೋಮುವಾದಿ ಮನಸ್ಥಿತಿಯೂ ಕಾರಣವಾಗಿರಬಹುದು ಎಂದಿದ್ದಾರೆ.
’90ರ ದಶಕದಲ್ಲಿ ಹಿಂದಿ ಚಿತ್ರರಂಗದಲ್ಲಿ ಈ ರೀತಿಯ ಪೂರ್ವಾಗ್ರಹ ಇರಲಿಲ್ಲ. ಈಗ ಸಂಗೀತ ಕಂಪನಿಗಳು ತಮ್ಮನ್ನು ಬದಿಗೊತ್ತಿ ಐವರು ಸಂಗೀತ ನಿರ್ದೇಶಕರ ಜೊತೆ ಒಪ್ಪಂದ ಮಾಡಿಕೊಂಡಿರುವ ಮಾಹಿತಿ ಕಿವಿಗೆ ಬಿದ್ದಿದೆ. ಕಳೆದ 8 ವರ್ಷಗಳಲ್ಲಿ ಅಧಿಕಾರ ಬದಲಾವಣೆ ಆಗಿದೆ. ಈಗ ಸೃಜನಶೀಲತೆ ಇಲ್ಲದವರು ನಿರ್ಣಯ ಮಾಡುತ್ತಿದ್ದಾರೆ. ಇದು ಮತೀಯ ಮನೋಭಾವದ ಪರಿಣಾಮವೂ ಇರಬಹುದು‘ ಎಂದು ರೆಹಮಾನ್ ಹೇಳಿದ್ದಾರೆ.
‘ನಾನು ಕೆಲಸ ಹುಡುಕಿ ಹೋಗುವುದಿಲ್ಲ. ನನ್ನನ್ನ ಹುಡುಕಿ ಬರುವ ಕೆಲಸವನ್ನ ಪ್ರಾಮಾಣಿಕವಾಗಿ ಮಾಡುತ್ತೇನೆ. ‘ರೋಜಾ’, ‘ಬಾಂಬೆ’, ‘ದಿಲ್ ಸೆ’, ‘ತಾಲ್’ ಮುಂತಾದ ಎವರ್ಗ್ರೀನ್ ಸಂಗೀತ ನೀಡಿದ್ದರೂ ಈಗಲೂ ಹೊರಗಿನವನಂತೆ ಕಾಣಲಾಗುತ್ತಿದೆ. ಸಂಗೀತ ದಂತಕಥೆ ಇಳಯರಾಜಾ ಅವರಿಗೂ ಇದೇ ರೀತಿಯ ಅನುಭವವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯಶ್, ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿರುವ ರೆಹಮಾನ್, ‘ನಾನು ಬ್ರಾಹ್ಮಣ ಶಾಲೆಯಲ್ಲಿ ಓದಿದ್ದೇನೆ. ರಾಮಾಯಣ ಮತ್ತು ಮಹಾಭಾರತಗಳ ಬಗ್ಗೆ ನನಗೆ ಆಳವಾದ ತಿಳುವಳಿಕೆ ಇದೆ. ನಾನು ಎಲ್ಲಾ ಧರ್ಮಗಳ ಒಳ್ಳೇತನವನ್ನು ಗೌರವಿಸುತ್ತೇನೆ‘ ಎಂದು ಹೇಳಿದ್ದಾರೆ.
—-





Be the first to comment