ದಳಪತಿ ವಿಜಯ್ ನಟನೆಯ ಬಹು ನಿರೀಕ್ಷಿತ ‘ಜನ ನಾಯಗನ್’ ಸಿನಿಮಾಗೆ ಸೌದಿ ಅರೆಬಿಯಾದಲ್ಲಿ ನಿಷೇಧ ಹೇರಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಇಸ್ಲಾಂ ಧರ್ಮವನ್ನು ಟೀಕಿಸುವ ದೃಶ್ಯಗಳು, ಪಾಕಿಸ್ತಾನ ವಿರೋಧಿ ಅಂಶಗಳು, ಮುಸ್ಲಿಂ ರಾಷ್ಟ್ರಗಳನ್ನು ಖಳರಂತೆ ಬಿಂಬಿಸುವ ಸಿನಿಮಾಗಳನ್ನು ಸೌದಿ ಸರ್ಕಾರ ನಿಷೇಧಿಸುತ್ತಾ ಬಂದಿದೆ. ‘ಜನ ನಾಯಗನ್’ ಸಿನಿಮಾಕ್ಕೂ ಇದೇ ಕಾರಣದಿಂದ ಸೆನ್ಸಾರ್ ನಿರಾಕರಣೆ ಎದುರಾಗಿದೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಭಾರತದಲ್ಲಿ ಬ್ಲಾಕ್‌ಬಸ್ಟರ್ ಆಗಿದ್ದ ‘ಧುರಂಧರ್’ ಸಿನಿಮಾಗೂ ಸೌದಿ ಅರೆಬಿಯಾದಲ್ಲಿ ನಿಷೇಧ ಹೇರಲಾಗಿತ್ತು.
‘ಜನ ನಾಯಗನ್’ ಸಿನಿಮಾದ ವಿಲನ್ ಪಾಕಿಸ್ತಾನ ಮೂಲದ ಪಾತ್ರವಾಗಿದೆ. ಸಿನಿಮಾದಲ್ಲಿ ಪಾಕಿಸ್ತಾನ ಹಾಗೂ ಪಾಕ್ ಸೈನ್ಯದ ವಿರುದ್ಧದ ಸಂಭಾಷಣೆಗಳು ಮತ್ತು ದೃಶ್ಯಗಳು ಸೇರಿವೆ. ಟ್ರೈಲರ್‌ನಲ್ಲೂ ಇವು ಕಾಣಿಸಿಕೊಂಡಿವೆ. ಈ ಅಂಶಗಳನ್ನು ಆಕ್ಷೇಪಿಸಿ ಸೌದಿ ಸೆನ್ಸಾರ್ ಮಂಡಳಿ ಸಿನಿಮಾಗೆ ಅನುಮತಿ ನೀಡಿಲ್ಲ ಎನ್ನಲಾಗಿದೆ.
ಆದರೆ ಚಿತ್ರತಂಡವು ಈ ಸಮಸ್ಯೆ ಬಗೆಹರಿಸಲು ಮುಂದಾಗಿದೆ. ಕೆಲ ಸಂಭಾಷಣೆಗಳನ್ನು ಮ್ಯೂಟ್ ಮಾಡುವುದು, ಕೆಲ ದೃಶ್ಯಗಳನ್ನು ಡಿಲೀಟ್ ಮಾಡುವ ಮೂಲಕ ಸೌದಿ ಸೆನ್ಸಾರ್ ಪಡೆಯಲು ಪ್ರಯತ್ನಿಸುತ್ತಿದೆ.
‘ಜನ ನಾಯಗನ್’ ಸಿನಿಮಾ ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರೀಮೇಕ್ ಆಗಿದೆ. ಸಿನಿಮಾವನ್ನು ಎಚ್. ವಿನೋದ್ ನಿರ್ದೇಶನ ಮಾಡಿದ್ದು, ರೀಮೇಕ್ ಆದರೂ ಸಹ ಹಲವು ಹೊಸ ದೃಶ್ಯಗಳನ್ನು ಸೇರಿಸಲಾಗಿದೆ. ವಿಜಯ್ ಅವರ ರಾಜಕೀಯ ಭವಿಷ್ಯಕ್ಕೆ ಪೂರಕವಾಗುವಂತಹ ಸಂಭಾಷಣೆಗಳು ಹಾಗೂ ದೃಶ್ಯಗಳು ಸಿನಿಮಾನಲ್ಲಿ ಹೆಚ್ಚು ಇರಲಿವೆ ಎನ್ನಲಾಗಿದೆ.
ವಿಜಯ್ ಸಾಕು ಪುತ್ರಿಯಾಗಿ ಮಲಯಾಳಂ ನಟಿ ಮಮಿತಾ ಬಿಜು ಅಭಿನಯಿಸಿದ್ದಾರೆ. ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ‘ಜನ ನಾಯಗನ್’ ಸಿನಿಮಾ ಜನವರಿ 9ರಂದು ಬಿಡುಗಡೆ ಆಗಲಿದೆ.
—-





Be the first to comment