‘ಸೆಂಚುರಿ ಗೌಡ’ ನಿಧನ

‘ತಿಥಿ’ ಸಿನಿಮಾ ಖ್ಯಾತಿಯ ‘ಸೆಂಚುರಿ ಗೌಡ’ ಪಾತ್ರಧಾರಿ ಸಿಂಗ್ರಿಗೌಡ ಅವರು ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ.

ನೂರಕ್ಕೂ ಹೆಚ್ಚು ವಯಸ್ಸಾಗಿದ್ದ ಸೆಂಚುರಿಗೌಡ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.  ಕೆಲವು ತಿಂಗಳ ಹಿಂದೆ ಬಿದ್ದ ಪರಿಣಾಮ ಸೊಂಟದ ಮೂಳೆ ಮುರಿದಿತ್ತು.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರಿಗೌಡನ ಕೊಪ್ಪಲಿನ  ಸಿಂಗ್ರಿಗೌಡ, ‘ತಿಥಿ’ (2015) ಸಿನಿಮಾದ ಬಳಿಕ  ಸೆಂಚುರಿಗೌಡ ಎಂದು ಬದಲಾಗಿದ್ದರು.  ‘ತಿಥಿ’  ಸಿನಿಮಾದಲ್ಲಿ ಸಿಂಗ್ರಿಗೌಡ, ಸೆಂಚುರಿ ಗೌಡ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಈ ಸಿನಿಮಾ ಹಿಟ್ ಆದ ಬಳಿಕ ಅವರಿಗೆ ಸಾಕಷ್ಟು ಜನಪ್ರಿಯತೆ ಲಭಿಸಿತ್ತು. ಚಿತ್ರ ಬಿಡುಗಡೆ  ನಂತರ ಹಲವು ಮಂದಿ ಅವರ ಗ್ರಾಮಕ್ಕೆ ಭೇಟಿ ನೀಡಿ ಫೋಟೋ ತೆಗೆಸಿಕೊಂಡು ಹೋಗುತ್ತಿದ್ದರು.

‘ತಿಥಿ’ ಸಿನಿಮಾಕ್ಕೆ ಸಿನಿಮಾ ನಿರ್ದೇಶಕರು ಸಿಂಗ್ರಿಗೌಡರನ್ನು ಆಯ್ಕೆ ಮಾಡಿದ್ದೇ ಒಂದು ವಿಶೇಷ ಘಟನೆ. ನಿರ್ದೇಶಕರು ಅವರ ಅಣ್ಣನ ತಿಥಿ ಕಾರ್ಯಕ್ರಮಕ್ಕೆ  ಬಂದ ವೇಳೆ ಸಿಂಗ್ರಿಗೌಡ ಅವರನ್ನು ಗಮನಿಸಿ ಚಿತ್ರಕ್ಕೆ ಅವಕಾಶ ನೀಡಿದ್ದರು. ಈ ಸಿನಿಮಾಗಾಗಿ ಅವರಿಗೆ 20 ಸಾವಿರ ರೂ. ಸಂಭಾವನೆ ನೀಡಲಾಗಿತ್ತು ಎನ್ನಲಾಗಿದೆ.

ತಿಥಿ ಸಿನಿಮಾದ ನಂತರ ಸಿಂಗ್ರಿಗೌಡ ಅವರಿಗೆ ಹಲವು ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಬಂದಿದ್ದವು. ಕೆಲವು ಸಿನಿಮಾ ತಂಡಗಳು ಸಂಭಾವನೆ ನೀಡದೆ ಮೋಸ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.

‘ತಿಥಿ’ ಸಿನಿಮಾದಲ್ಲಿ ಗಡ್ಡಪ್ಪ ಪಾತ್ರ ಮಾಡಿದ್ದ ಚನ್ನೇಗೌಡ ಅವರು 2025ರ ನವೆಂಬರ್ 12ರಂದು ನಿಧನರಾಗಿದ್ದರು.  ಅದೇ ಚಿತ್ರದ  ಪ್ರಮುಖ ಪಾತ್ರಧಾರಿ ಸಿಂಗ್ರಿಗೌಡ ಅವರೂ ಇದೀಗ ಕೊನೆಯುಸಿರು ಎಳೆದಿದ್ದಾರೆ. ಸೋಮವಾರ  ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!