ರಾಧೇಯ

Movie Review: ಕೊಲೆಗಡುಕನ ಅಂತರಂಗದ ಅನಾವರಣ

ಚಿತ್ರ: ರಾಧೇಯ
ನಿರ್ದೇಶಕ: ವೇದಗುರು
ನಿರ್ಮಾಣ: ಕೀರ್ತಿ ಚಹ್ನ ಸಿನಿಮಾ ಕಾರ್ಖಾನೆ
ತಾರಾಗಣ: ಅಜಯ್ ರಾವ್, ಧನ್ಯಾ ಬಾಲಕೃಷ್ಣ, ಸೊನಾಲ್ ಮೊಂತೆರೋ‌ ಮೊದಲಾದವರು..
ರೇಟಿಂಗ್: 3/5

ಒಂದು ಕೊಲೆ ನಡೆದರೆ ಅದಕ್ಕೆ ನೂರು ಸಮರ್ಥನೆ ನೀಡಬಹುದು. ಆದರೆ 36 ಕೊಲೆ ಮಾಡಿದ ಸರಣಿ ಹಂತಕ ಕೂಡ ಸಮರ್ಥನೆ ನೀಡಿದರೆ ಹೇಗಿರಬಹುದು? ಅದುವೇ ರಾಧೇಯ.

ರಾಧೇಯ ಎನ್ನುವ ಹೆಸರಿಗೂ ಸರಣಿ ಹಂತಕನ ಕಥೆಗೂ ಸಂಬಂಧ ಏನಿರಬಹುದು? ಇದು ಎಲ್ಲರಿಗೂ ಸಹಜವಾಗಿ ಕಾಡುವ ಪ್ರಶ್ನೆ. ರಾಧೇಯಾ ಎನ್ನುವ ಹೆಸರು ಕೃಷ್ಣನದ್ದು. ಕೃಷ್ಣನಂತೆ ಒಬ್ಬ ತಾಯಿಗೆ ಹುಟ್ಟಿ ಮತ್ತೊಬ್ಬ ತಾಯಿಯ ಬಳಿಯಲ್ಲಿ ಬೆಳೆದು ಶತ್ರು ಸಂಹಾರಕನಾಗಿ ಮೆರೆಯುತ್ತಾನೆ. ಆದರೆ ಈತ ಸಾಕು ತಾಯಿಯನ್ನು ಕೂಡ ಕೊಂದಾತ ಎನ್ನುವುದು ಆಪಾದನೆ. ಆ ಕೊಲೆ ಸೇರಿದಂತೆ ಪ್ರತಿಯೊಂದು ಕೊಲೆಗಳ ಹಿಂದಿನ ಸತ್ಯದ ಅನಾವರಣವೇ ರಾಧೇಯ.

ಅಜಯ್ ರಾವ್ ಕೃಷ್ಣನಾಗಿ ಗುರುತಿಸಿಕೊಂಡವರು. ಈ ಪಾತ್ರದಲ್ಲಿ ಒಬ್ಬ ಪ್ರೇಮಿ ಇರುತ್ತಿದ್ದ. ಈ ಬಾರಿ ಕೂಡ ಕೃಷ್ಣನದೇ ಮತ್ತೊಂದು ನಮಾಧೇಯದೊಂದಿಗೆ ಆಗಮಿಸಿದ್ದಾರೆ. ಮೊದಲ ನೋಟಕ್ಕೆ ಅಜಯ್ ರಾವ್ ಮುದ್ದಾಗಿಯೇ ಕಾಣಿಸುತ್ತಾರೆ. ಆದರೆ ತನಗೆ ಎದುರಾದ ಘಟನೆಗಳು ಮತ್ತು ಅವುಗಳಿಗೆ ತಾನು ನೀಡಿದ ಪ್ರತಿಕ್ರಿಯೆ ಬಗ್ಗೆ ಹೇಳುತ್ತಾ ಕ್ರೂರ ಮುಖದ ಅನಾವರಣ ಮಾಡುತ್ತಾರೆ. ಚೇಂಬರ್ ಒಳಗೆ ಬರುವ ಲಾಯರ್ ಬೆಚ್ಚಿ ಬೀಳುತ್ತಾರೆ. ಆತ ತನ್ನ ಕಥೆ ಬರೆಯಲು ಒಬ್ಬ ಪತ್ರಕರ್ತೆಯನ್ನು ಕರೆಸಲು ಹೇಳುತ್ತಾನೆ. ಕ್ಯಾತ ಕ್ರೈಂ ರಿಪೋರ್ಟರ್ ಅನುಪಮಾ ರಂಜನ್ ಆಗಮನವಾಗುತ್ತದೆ. ಅನುಪಮಾ ಆಗಮನದೊಂದಿಗೆ ಕಥೆಗೆ ಹೊಸ ಟ್ವಿಸ್ಟ್ ದೊರಕುತ್ತದೆ. ಅದೇನು ಅನ್ನುವುದೇ ಕುತೂಹಲಕಾರಿ ವಿಚಾರ.

ಅಜಯ್ ರಾವ್ ಪತ್ನಿಯಾಗಿ ಸೋನಲ್ ಮೊಂಟೆರೋ ನಟಿಸಿದ್ದಾರೆ. ಅನುಪಮಾ ರಂಜನ್ ಎನ್ನುವ ಪತ್ರಕರ್ತೆಯಾಗಿ ಧನ್ಯಾ ಬಾಲಕೃಷ್ಣ ನೈಜ ನಟನೆಯಿಂದ ಗಮನ ಸೆಳೆದಿದ್ದಾರೆ. ಧನ್ಯ ಪತಿಯ ಪಾತ್ರದಲ್ಲಿ ಬರುವ ಅಶೋಕ್ ಪಾತ್ರವೂ ನೆನಪಲ್ಲಿ ಉಳಿಯುತ್ತದೆ.

ಎಸಿಪಿಯಾಗಿ ಅರವಿಂದ್ ರಾವ್ ಸಂಭಾಷಣೆ ಶೈಲಿಯಲ್ಲಿ ಹೊಸತನ ತೋರಿಸಿದ್ದಾರೆ. ಕರಿಕೋಟು ಧರಿಸಿ ಸೆಲ್ ನೊಳಗೆ ಕಾಲಿಡುವ ಗಿರೀಶ್ ಶಿವಣ್ಣ ಥರ ಥರ ನಡುಗುವ ಮೂಲಕ ಪ್ರೇಕ್ಷಕರನ್ನು ನಗೆ ಕಡಲಲ್ಲಿ ತೇಲಿಸುತ್ತಾರೆ. ಲಾಯರ್ ವರಲಕ್ಷ್ಮಿಯಾಗಿ ಭವಾನಿ ಪ್ರಕಾಶ್ ಅಬ್ಬರಿಸಿದ್ದಾರೆ! ನಿರ್ದೇಶಕ ವೇದಗುರು ಒಂದು ಕ್ರೈಂ ಥ್ರಿಲ್ಲರ್ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಛಾಯಾಗ್ರಹಣ, ಹಿನ್ನೆಲೆ ಸಂಗೀತ ಎಲ್ಲವು ಚಿತ್ರದ ಗುಣಮಟ್ಟವನ್ನು ಉತ್ತಮಗೊಳಿಸಿದೆ. ಒಂದೊಳ್ಳೆಯ ಟೈಮ್ ಪಾಸ್ ಚಿತ್ರವಾಗಿ ಖಂಡಿತ ನಿಮ್ಮ ಮೊದಲ ಆಯ್ಕೆ ಇದೇ ಆಗಿರಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!