ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣ ಸಂಬಂಧ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ನಟಿ ರನ್ಯಾರಾವ್ ಸೇರಿ ನಾಲ್ವರು ಆರೋಪಿಗಳ ವಿರುದ್ಧ ವಿಶೇಷ ಆರ್ಥಿಕ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಆರೋಪಪಟ್ಟಿ 2,200 ಪುಟಗಳಿದ್ದು, ಅದರ 350 ಪುಟಗಳಲ್ಲಿ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. 2025ರ ಮಾರ್ಚ್ 3ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14 ಕೆಜಿ ಚಿನ್ನದ ಗಟ್ಟಿಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದಾಗ ರನ್ಯಾರಾವ್ ನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಲಾಯಿತು. ನಂತರ ಇತರ ಮೂವರು ಆರೋಪಿಗಳನ್ನೂ ಬಂಧಿಸಲಾಯಿತು.
ಭರತ್ ಕುಮಾರ್ ಜೈನ್ ಹೊರತುಪಡಿಸಿ, ರನ್ಯಾ, ತರುಣ್ ಮತ್ತು ಸಾಹಿಲ್ ವಿರುದ್ಧ ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆ ತಡೆಗಟ್ಟುವಿಕೆ (ಕಾಫಿಪೋಸಾ) ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ತರುಣ್ ಕೊಂಡರಾಜು ಮತ್ತು ರನ್ಯಾರಾವ್ ದುಬೈನಿಂದ ಭಾರತಕ್ಕೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದರು. ಜೀನಿವಾ ಅಥವಾ ಬ್ಯಾಂಕಾಕ್ ಮೂಲಕ ಚಿನ್ನವನ್ನು ಭಾರತಕ್ಕೆ ತರಲಾಗುತ್ತಿತ್ತು. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ರನ್ಯಾರಾವ್ ಅವರಿಗೆ ಸೇರಿದ 34.12 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ 2025ರ ಜುಲೈನಲ್ಲಿ ಮುಟ್ಟುಗೋಲು ಹಾಕಿತ್ತು.
ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿರುವ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಲೇಔಟ್ ಮತ್ತು ಅರ್ಕಾವತಿ ಲೇಔಟ್‌ನಲ್ಲಿರುವ ನಿವಾಸ, ತುಮಕೂರಿನ ಕೈಗಾರಿಕಾ ನಿವೇಶನ ಮತ್ತು ಆನೇಕಲ್ ತಾಲ್ಲೂಕಿನ ಕೃಷಿ ಜಮೀನು ಇದರಲ್ಲಿ ಸೇರಿವೆ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.
—-





Be the first to comment