ಚಿತ್ರ: ಲವ್ ಒಟಿಪಿ
ನಿರ್ದೇಶಕ: ಅನೀಶ್
ನಿರ್ಮಾಪಕ: ವಿಜಯ್ ಎಂ ರೆಡ್ಡಿ
ತಾರಾಗಣ: ಅನೀಶ್, ಸ್ವರೂಪಿಣಿ, ಜಾಹ್ನವಿಕಾ ಕಲಕೇರಿ ಮೊದಲಾದವರು.
ರೇಟಿಂಗ್: 3.5
ಅನೀಶ್ ಹೊಸ ಲವ್ ಸ್ಟೋರಿಯೊಂದಿಗೆ ಬಂದಿದ್ದಾರೆ. ಈ ಬಾರಿ ಒಂದಲ್ಲ ಎರಡೆರಡು ಲವ್ ಸ್ಟೋರಿ ಜತೆ ಬಂದಿದ್ದಾರೆ. ಬರುವಾಗ ಲವ್ ಮತ್ತು ಒಟಿಪಿಯನ್ನೂ ತಂದಿದ್ದಾರೆ. ಚಿತ್ರದಲ್ಲಿ ಒಟಿಪಿ ಅಂದರೆ ಓವರ್ ಟಾರ್ಚರ್ ಪ್ರೆಷರ್. ಪ್ರೀತಿಯ ಜತೆಯಲ್ಲಿ ಓವರ್ ಟಾರ್ಚರ್ ಮತ್ತು ಪ್ರೆಷರ್ ಎದುರಾದರೆ ಏನಾದೀತು ಎನ್ನುವುದೇ ಈ ಚಿತ್ರದ ಹೂರಣ.
ಆತನ ಹೆಸರು ಅಕ್ಷಯ್. ಕಾಲೇಜ್ ನಲ್ಲಿ ಒಬ್ಬ ಉತ್ತಮ ಕ್ರಿಕೆಟಿಗನಾಗಿ ಗುರುತಿಸಿಕೊಂಡ ಹುಡುಗ. ಅದು ಯಾವುದೋ ಒಂದು ಸಂದರ್ಭದಲ್ಲಿ ಈತನನ್ನು ಕಂಡು ಬೆನ್ನು ಬೀಳುತ್ತಾಳೆ ಅದೇ ಕಾಲೇಜ್ ವಿದ್ಯಾರ್ಥಿನಿ ಸನಾ. ಆದರೆ ಅಕ್ಷಯ್ ಸನಾಳ ಸಂಪರ್ಕಕ್ಕೇ ಸಿಗುವುದಿಲ್ಲ. ಅದಕ್ಕೆ ಕಾರಣ ತನ್ನ ತಂದೆಯ ಮೇಲಿರುವ ಭಯ. ಅಕ್ಷಯ್ ತಂದೆ ಒಬ್ಬ ಪೊಲೀಸ್ ಅಧಿಕಾರಿ. ಆದರೆ ಅಕ್ಷಯ್ ಭಯಕ್ಕೆ ಕಾರಣ ಇದೇನಲ್ಲ. ತಂದೆಗೆ ಪ್ರೇಮ ಅಂದರೇನೇ ಆಗದು. ಅದರಲ್ಲೂ ಮಗ ಪ್ರೀತಿಯಲ್ಲಿ ಬೀಳುತ್ತಾನೆ ಅಂದರೆ ಸಹಿಸಲಾಗದು.
ಪ್ರೀತಿಗೆ ಒಪ್ಪಿಗೆ ಕೊಟ್ಟು ಸನಾ ಜತೆಗಿನ ಸಂಬಂಧಕ್ಕೆ ವರ್ಷ ಐದು ದಾಟುತ್ತದೆ. ಆದರೂ ತನ್ನ ಮನೆಯಲ್ಲಿ ಮಾತ್ರ ಈ ಸತ್ಯವನ್ನು ಅಡಗಿಸುತ್ತಾನೆ. ಮತ್ತೊಂದೆಡೆ ಸನಾ ಮನೆಯವರಿಗೆ ಎಲ್ಲವೂ ತಿಳಿದಿರುತ್ತದೆ. ಆಕೆಯ ತಾಯಿ, ತಂದೆ, ಅಣ್ಣ ಎಲ್ಲರೂ ಸನಾ ಪ್ರೀತಿಯನ್ನು ಒಪ್ಪಿಕೊಂಡಿರುತ್ತಾರೆ. ಆದರೆ ಸನಾಳದ್ದು ಹುಚ್ಚು ಪ್ರೀತಿ. ಅತಿಯಾದರೆ ಅಮೃತವೂ ವಿಷ. ಸನಾಳ ಪೊಸೆಸಿವ್ ಪ್ರೀತಿ ಅಕ್ಷಯ್ ಗೆ ಟಾರ್ಚರ್ ಆಗಿ ಕಾಡುತ್ತದೆ. ಈಕೆಯಿಂದ ಹೇಗಾದರೂ ಪಾರಾಗಬೇಕು ಯೋಜನೆ ಹಾಕುತ್ತಿರುತ್ತಾನೆ. ಇದೇ ಸಂದರ್ಭದಲ್ಲಿ ಫಿಸಿಯೋ ಕೋಚ್ ಆಗಿ ಬರುವಾಕೆ ಹತ್ತಿರವಾಗುತ್ತಾಳೆ. ಆಕೆಯ ಹೆಸರು ನಕ್ಷತ್ರ. ಸನಾಳಿಂದ ದೂರಾಗಿ ನಕ್ಷತ್ರಳ ಬೆನ್ನು ಬೀಳುವ ಅಕ್ಷಯ್ ಬಾಳಿನಲ್ಲಿ ಮುಂದೇನಾಗುತ್ತದೆ ಎನ್ನುವುದೇ ಈ ಚಿತ್ರದ ಪ್ರಧಾನ ಅಂಶ.
ಒಂದು ಸಾಧಾರಣ ಪ್ರೇಮಕಥೆಯನ್ನು ಆಕರ್ಷಕ ಚಿತ್ರಕಥೆಯೊಂದಿಗೆ ಅದ್ಭುತವಾಗಿ ನಿರ್ದೇಶಿಸಿರುವ ಕೀರ್ತಿ ಅನೀಶ್ ಗೆ ಸಲ್ಲುತ್ತದೆ. ನಿರ್ದೇಶಕ ಮಾತ್ರವಲ್ಲ ನಟನಾಗಿಯೂ ಗಮನಸೆಳೆಯುತ್ತಾರೆ. ಸನಾ ಪಾತ್ರಕ್ಕೆ ಸ್ವರೂಪಿಣಿ ಜೀವ ನೀಡಿದ್ದಾರೆ. ಅಕ್ಷಯ್ ತಂದೆ ಪೊಲೀಸ್ ಅಧಿಕಾರಿಯಾಗಿ ಟಾಲಿವುಡ್ ನಟ ರಾಜೀವ್ ಕನಕಲ ಮುದನೀಡುವ ನಟನ ನೀಡಿದ್ದಾರೆ. ಸನಾ ತಂದೆಯಾಗಿ ರವಿಭಟ್ ಅಭಿನಯಿಸಿದ್ದಾರೆ. ಫಿಸಿಯೋಥೆರಪಿಸ್ಟ್ ನಕ್ಷತ್ರಾ ತಾಯಿಯಾಗಿ ತುಳಸಿ ಶಿವಮಣಿ ಕಾಣಿಸಿದ್ದಾರೆ. ನಕ್ಷತ್ರಾ ಪಾತ್ರದಲ್ಲಿ ಜಾಹ್ನವಿಕಾ ಕಲಕೇರಿ ತನ್ನ ಸೌಂದರ್ಯ ಮತ್ತು ಅಭಿನಯದಿಂದ ಮನ ಸೆಳೆಯುತ್ತಾರೆ. ಆನಂದ್ ರಾಜಾ ವಿಕ್ರಮ್ ಸಂಗೀತದಲ್ಲಿನ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರವನ್ನು ಉತ್ಸಾಹದಿಂದ ನೋಡುವಂತೆ ಮಾಡಿವೆ.
ಪ್ರೇಮ ಚಿತ್ರಗಳಿಗೆ ಕಥೆ ಮುಗಿಯಿತು ಎನ್ನುವವರ ಮಧ್ಯೆ ಇಬ್ಬರು ಪ್ರೇಯಸಿಯರ ಕಥೆಯನ್ನೇ ಹೇಗೆ ಆಕರ್ಷಕವಾಗಿ ಹೇಳಬಹುದು ಎನ್ನುವುದಕ್ಕೆ ಲವ್ ಒಟಿಪಿ ಒಂದೊಳ್ಳೆಯ ಉದಾಹರಣೆಯಾಗಿ ಮೂಡಿ ಬಂದಿದೆ.





Be the first to comment