‘ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ ಅಲಿಯಾಸ್ ಚನ್ನೇಗೌಡ (89) ಇಂದು ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಗಡ್ಡಪ್ಪ ಬಳಲುತ್ತಿದ್ದರು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಗಡ್ಡಪ್ಪ ಮೂಲತಃ ಮಂಡ್ಯ ತಾಲೂಕಿನ ನೊದೆಕೊಪ್ಪಲು ಗ್ರಾಮದವರು. ಅವರು ಅಸ್ತಮಾ, ಕೆಮ್ಮು – ಉಬ್ಬಸ, ಶ್ರವಣ ದೋಷ, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಪಾರ್ಶ್ವವಾಯು ಸಮಸ್ಯೆಯೂ ಬಾಧಿಸುತ್ತಿತ್ತು. ತಿಂಗಳ ಹಿಂದೆ ಬಿದ್ದು, ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಆನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇಂದು ಸಂಜೆ ವೇಳೆ ಸ್ವಗ್ರಾಮ ನೊದೆಕೊಪ್ಪಲು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಪುತ್ರಿ ಶೋಭಾ ಮಾಹಿತಿ ನೀಡಿದ್ದಾರೆ.
ಗಡ್ಡಪ್ಪ ರೈತಾಪಿ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ’ನಾವು ರೈತರು, ನಮಗೆ ಅಭಿನಯ ಗೊತ್ತಿಲ್ಲ. ಗೊತ್ತಿರುವಷ್ಟು ಅಭಿನಯಿಸುತ್ತಿದ್ದೇವೆ’’ ಎಂದು ಗಡ್ಡಪ್ಪ ಹೇಳಿದ್ದರು.
ತಿಥಿ ಚಿತ್ರದಲ್ಲಿ ಅಭಿನಯದ ನಂತರ ಚನ್ನೇಗೌಡ, ಗಡ್ಡಪ್ಪ ಎಂದೇ ಹೆಸರುವಾಸಿಯಾಗಿದ್ದರು. ‘ಗಡ್ಡಪ್ಪನ ಸರ್ಕಲ್’, ‘ತಾತನ್ ತಿಥಿ ಮೊಮ್ಮಗನ ಪ್ರಸ್ಥ’, ‘ಹಾಲು – ತುಪ್ಪ’, ‘ತರ್ಲೇ ವಿಲೇಜ್’, ‘ಏನ್ ನಿನ್ ಪ್ರಾಬ್ಲಮ್ಮು’, ‘ಹಳ್ಳಿ ಪಂಚಾಯತಿ’, ‘ಗಡ್ಡಪ್ಪನ್ ದುನಿಯಾ’, ‘ಜಾನಿ ಜಾನಿ ಯೆಸ್ ಪಪ್ಪಾ’ ಮುಂತಾದ ಸಿನಿಮಾಗಳಲ್ಲಿ ಗಡ್ಡಪ್ಪ ಅಭಿನಯಿಸಿದ್ದರು.
—-





Be the first to comment