ಚಿತ್ರ: ರೋಣ
ನಿರ್ದೇಶನ: ಸತೀಶ್ ಕುಮಾರ್
ನಿರ್ಮಾಣ: ಬಿ ಕೆ ಆರ್ ಪ್ರೊಡಕ್ಷನ್ಸ್
ತಾರಾಗಣ: ರಘುರಾಜ ನಂದ, ಪ್ರಕೃತಿ ಪ್ರಸಾದ್, ಶರತ್ ಲೋಹಿತಾಶ್ವ ಮೊದಲಾದವರು.
ರೇಟಿಂಗ್: 3.5/5
ರಾತ್ರಿ ಪಯಣದ ವೇಳೆ ನಡೆಯುವ ಒಂದು ಕೊಲೆಯಿಂದಲೇ ಚಿತ್ರ ಶುರುವಾಗುತ್ತದೆ. ವಿರಾಮದ ಹೊತ್ತಿಗೆ ನಾಲ್ಕು ಹೆಣಗಳು ನೇತಾಡುತ್ತಿರುತ್ತವೆ. ಹೀಗೆ ನಡೆಯುವ ಕೊಲೆಗಳ ಹಿಂದೆ ಪೊಲೀಸ್ ಕೈವಾಡ ಇರುವ ಶಂಕೆ ತೋರುವ ನಾಯಕ ಮತ್ತು ತಂಡದವರು ಖುದ್ದಾಗಿ ತನಿಖೆಗೆ ಮುಂದಾಗಿರುತ್ತಾರೆ. ಈ ತನಿಖೆಯ ವೇಳೆ ಬಯಲಾಗುವ ಪ್ರತಿಯೊಂದು ಸತ್ಯಗಳು ಪಾತ್ರಗಳನ್ನು ಮಾತ್ರವಲ್ಲ, ಪ್ರೇಕ್ಷಕರನ್ನು ಕೂಡ ಬೆರಗಾಗುವಂತೆ ಮಾಡುತ್ತದೆ.
ರೋಣ ಎನ್ನುವ ಹಳ್ಳಿಯಲ್ಲಿ ನಡೆಯುವ ಕೊಲೆಗಳಲ್ಲಿ ನಾಯಕನ ತಂದೆಯ ಸಾವು ಕೂಡ ಸಂಭಾವಿಸುತ್ತದೆ. ತಂದೆ ರಾಮಕೃಷ್ಣನ ಪಾತ್ರವನ್ನು ಶರತ್ ಲೋಹಿತಾಶ್ವ ನಿಭಾಯಿಸಿದ್ದಾರೆ.
ರಾಮಕೃಷ್ಣ ಮಹಾನ್ ಸಮಾಜ ಸೇವಕ. ಪುತ್ರ ಶಿವು ಕೂಡ ತಂದೆಯ ಹಾದಿಯಲ್ಲೇ ನಡೆಯುವ ವ್ಯಕ್ತಿ. ಆದರೆ ರೋಣದ ರಾಜಕೀಯ ವ್ಯವಸ್ಥೆ ಕೆಟ್ಟು ಕೆರ ಹಿಡಿದಿರುತ್ತದೆ. ದೇವಿಯ ಜಾತ್ರೆ ನಡೆಸುವ ನೆಪ ಹೇಳಿ ಮತದಾರರನ್ನು ಸೆಳೆಯಲು ಯತ್ನಿಸುತ್ತಾರೆ. ಇಂಥವರ ಪಾಲಿಗೆ ರಾಮಕೃಷ್ಣ ಪರಮ ವಿರೋಧಿ ಆಗಿರುತ್ತಾನೆ. ಆದರೆ ಇದೇ ವಿರೋಧವೇ ಕೊಲೆಯ ತನಕ ಕೊಂಡೊಯ್ದಿತೇ? ಎನ್ನುವುದು ಪ್ರಶ್ನೆ. ಇದಕ್ಕೆ ಚಿತ್ರದ ನಾಯಕ ಶಿವು ಮತ್ತು ತಂಡ ಉತ್ತರ ಪತ್ತೆ ಮಾಡುವ ರೀತಿಯೇ ರೋಚಕ.
ಶಿವು ಪಾತ್ರಧಾರಿ ರಘು ರಾಜ ನಟನೆ ಅದ್ಭುತವಾಗಿದೆ. ಹೊಡೆದಾಟದ ದೃಶ್ಯಗಳಲ್ಲಿ ಆವೇಶ ಮೈ ಹೊಕ್ಕ ಹಾಗೆ ನಟಿಸಿದ್ದಾರೆ. ಸುಧೀರ್ಘ ಸಂಭಾಷಣೆಗಳನ್ನು ಧ್ರುವ ಸರ್ಜಾ ಹಾಗೆ ಲೀಲಾಜಾ ಲವಾಗಿ ಹೇಳಿದ್ದಾರೆ. ಪ್ರೇಮ ದೃಶ್ಯಗಳಲ್ಲಿ ಪ್ರೀತಿಯ ಕಿಚ್ಚು ಮೂಡುವಂತೆ ಕಾಣಿಸಿದ್ದಾರೆ. ಕಾವ್ಯ ಪಾತ್ರದಲ್ಲಿ ಕಾಣಿಸಿರುವ ಪ್ರಕೃತಿ ಪ್ರಸಾದ್ ಸರಿಯಾದ ಸಾಥ್ ನೀಡಿದ್ದಾರೆ.
ಮುಖ್ಯಮಂತ್ರಿ ಪಾತ್ರದಲ್ಲಿರುವ ನಟ ಕೆ ಎಸ್ ಶ್ರೀಧರ್ ಕಥೆಗೊಂದು ಪ್ರಮುಖ ಟ್ವಿಸ್ಟ್ ಕೊಡುವ ದೃಶ್ಯದಲ್ಲಿ ಕಾಣಿಸಿದ್ದಾರೆ. ನಟ ಬಲ ರಾಜವಾಡಿ ಕೂಡ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ನರಸಿಂಹನ ಅತ್ಯಾಪ್ತ ಹನುಮಂತು ಆಗಿ ಬಲ ರಾಜವಾಡಿ ಇದ್ದರೆ, ಹನುಮಂತು ಪುತ್ರಿ ಕಾವ್ಯ ಚಿತ್ರದ ನಾಯಕಿಯಾಗಿದ್ದಾರೆ. ರಾಮಕೃಷ್ಣರ ಪತ್ನಿಯಾಗಿ ನಟಿಸಿರುವ ವಾಣಿ ಶ್ರೀ ಪುತ್ರನ ಮೇಲೆ ಮಮತೆ ತೋರುವ ದೃಶ್ಯದಲ್ಲಿ ಚೆನ್ನಾಗಿ ಸ್ಕೋರ್ ಮಾಡಿದ್ದಾರೆ.
ಗಗನ್ ಬಡೇರಿಯ ಸಂಗೀತದಲ್ಲಿನ ಹಾಡುಗಳು ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ. ದೇವಿಯ ಕುರಿತಾದ ಹಾಡೊಂದನ್ನು ಕೈಲಾಶ್ ಖೇರ್ ಹಾಡಿದ್ದು ಮೈ ನವಿರೇಳಿಸುತ್ತದೆ. ಅಕ್ಷನ್ ಪ್ರಿಯರು, ದೈವ ಭಕ್ತರು ಹೀಗೆ ಎಲ್ಲ ವಿಭಾಗದ ಪ್ರೇಕ್ಷಕರನ್ನು ಸೆಳೆಯುವ ಚಿತ್ರ ಇದು.





Be the first to comment