ರಜನಿಕಾಂತ್‌ ಚಿತ್ರರಂಗಕ್ಕೆ ಗುಡ್‌ ಬೈ!

ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್‌ ರಜನಿಕಾಂತ್‌ ಚಿತ್ರರಂಗಕ್ಕೆ ಗುಡ್‌ ಬೈ ಹೇಳಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

ಈ ಸುದ್ದಿಯನ್ನು ಸ್ವತಃ ರಜನಿಯವರ ಆಪ್ತ ವಲಯದವರು ತಿಳಿಸಿದ್ದಾರೆ. ರಂಜನಿಕಾಂತ್‌ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಪೂರ್ಣಗೊಳಿಸಿದ ನಂತರ ನಟನೆಗೆ ಗುಡ್ ಬೈ ಹೇಳುವ ನಿರ್ಧಾರಕ್ಕೆ ಬಂದಿದ್ದಾರೆ  ಎನ್ನಲಾಗಿದೆ.

ರಜನಿಕಾಂತ್‌ ಅವರಿಗೆ 74 ವರ್ಷ ವಯಸ್ಸು.  ಇತ್ತೀಚೆಗಷ್ಟೇ  ಜೈಲರ್ ಹಾಗೂ ಕೂಲಿ ಆ್ಯಕ್ಷನ್ ಚಿತ್ರಗಳಲ್ಲಿ ನಟಿಸಿದ್ದರು.  ಆ್ಯಕ್ಷನ್ ದೃಶ್ಯಗಳ ವೇಳೆ ದೈಹಿಕವಾಗಿ ಕಷ್ಟ ಅನುಭವಿಸುತ್ತಿದ್ದರಂತೆ. ಕೂಲಿ ಚಿತ್ರ ಚಿತ್ರೀಕರಣದ ಸಮಯದಲ್ಲಿ ಸಣ್ಣಪುಟ್ಟ ಗಾಯಗಳೂ ಆಗಿದ್ದವು. ವಯೋಸಹಜ ಆರೋಗ್ಯ ಸಮಸ್ಯೆಗಳೂ ಕಾಡತೊಡಗಿದ ಹಿನ್ನೆಲೆಯಲ್ಲಿ  ಕುಟುಂಬದವರ ಸಲಹೆಯ ಮೇರೆಗೆ ಚಿತ್ರರಂಗದಿಂದ ನಿವೃತ್ತಿಯಾಗಲು ರಜನಿಕಾಂತ್‌  ತೀರ್ಮಾನಿಸಿದ್ದಾರೆ.

ಕೂಲಿ ಚಿತ್ರದ ಕೆಲವು ಸಾಹಸ ದೃಶ್ಯಗಳಿಗೆ ಡ್ಯೂಪ್ ಬಳಸಲಾಗಿದ್ದ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ  ಅಭಿಮಾನಿಗಳಿಂದ ಟೀಕೆಗಳು ವ್ಯಕ್ತವಾಗಿದ್ದವು. ಇದರಿಂದ ಬೇಸರಗೊಂಡ ರಜನಿ  ಚಿತ್ರರಂಗ ತೊರೆಯುವ ನಿರ್ಧಾರಕ್ಕೆ ಮನಸ್ಸು ಮಾಡಿಕೊಂಡಿದ್ದರು ಎಂಬ ಮಾತು ಕೇಳಿ ಬರುತ್ತಿದೆ.

ರಜನಿಕಾಂತ್  ನಿರ್ದೇಶಕ ಸಿ. ಸುಂದರ್ ಅವರ ಕಾಮಿಡಿ ಚಿತ್ರ,  ಜೈಲರ್ 2  ಹಾಗೂ ಕಮಲ್ ಹಾಸನ್ ಅವರ ಜೊತೆಗಿನ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈ ಮೂರೂ ಯೋಜನೆಗಳು 2026ರ ಅಂತ್ಯದೊಳಗೆ ಮುಗಿಯುವ ನಿರೀಕ್ಷೆಯಿದೆ.  ನಂತರ ರಜನಿ ನಿವೃತ್ತಿಯ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಗಳಿವೆ.

ತಮ್ಮ ನಟನೆಯ ಮೂಲಕ  ಕೋಟಿ ಅಭಿಮಾನಿಗಳನ್ನು ಸಂಪಾದಿಸಿರುವ ರಜನಿಕಾಂತ್‌  ತಮ್ಮ ಕರಿಯರ್‌ನ ಉನ್ನತ ಹಂತದಲ್ಲಿದ್ದಾಗಲೇ ಚಿತ್ರರಂಗಕ್ಕೆ ವಿದಾಯ ಹೇಳುವುದು ಗೌರವದ ವಿಷಯ ಎಂದು  ಅಭಿಪ್ರಾಯ ಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!