ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ ಎಂದು ‘ಕಾಂತಾರ: ಚಾಪ್ಟರ್ 1’ ಕುರಿತು ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೇಳಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಚಿತ್ರ ಅಕ್ಟೋಬರ್ 2 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಜಾಗತಿಕವಾಗಿ 600 ಕೋಟಿ ರೂ. ಗಳಿಸಿದೆ. ಚಿತ್ರದ ಕಥೆಯ ಬಗ್ಗೆ ಕೆಲವೊಂದು ಆರೋಪ ಬರುತ್ತಿರುವ ಬೆನ್ನಲ್ಲೇ ನಿರ್ದೇಶಕರು ಈ ಬಗ್ಗೆ ಉತ್ತರಿಸಿದ್ದಾರೆ.
‘ಒಬ್ಬ ಕಥೆಗಾರನಾಗಿ, ನಾನು ಎಂದಿಗೂ ಪಕ್ಷಪಾತಿಯಾಗಿರಬಾರದು. ನಾವು ಜನರಿಗೆ ಕಥೆಗಳನ್ನು ಹೇಳಬೇಕು. ಉದಾಹರಣೆಗೆ ನಮ್ಮ ಜಾನಪದ, ಭಾರತೀಯತೆ ಮತ್ತು ಪ್ರಕೃತಿಯನ್ನು ಆರಾಧಿಸುವ ನಮ್ಮ ನಂಬಿಕೆ ವ್ಯವಸ್ಥೆಯ ಬಗ್ಗೆ. ಆದ್ದರಿಂದ ಈ ಎಲ್ಲ ಅಂಶಗಳನ್ನು ಸೇರಿಸುವ ಮೂಲಕ ನಾವು ಈ ಕಥೆಯನ್ನು ರಚಿಸಿದ್ದೇವೆ’ ಎಂದರು.
ರಾಜಕೀಯ ಪಕ್ಷಗಳು ಮತ್ತು ಯಾವುದೇ ಸಿದ್ಧಾಂತ ಅಥವಾ ಕಾರ್ಯಸೂಚಿ ಚಿತ್ರದಲ್ಲಿ ಇಲ್ಲ. ನಾವು ಕಥೆಯನ್ನು ಹೇಳುತ್ತಿದ್ದೇವೆ. ಜನರು ಅದನ್ನು ಇಷ್ಟಪಡುತ್ತಿದ್ದಾರೆ ಮತ್ತು ಮೆಚ್ಚುತ್ತಿದ್ದಾರೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘ಕಾಂತಾರ: ಚಾಪ್ಟರ್ 1’ 2022ರ ಬ್ಲಾಕ್ಬಸ್ಟರ್ ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿದೆ. ಅನಿರುದ್ಧ್ ಮಹೇಶ್ ಮತ್ತು ಶನಿಲ್ ಗುರು ಅವರೊಂದಿಗೆ ಬರಹಗಾರರಾಗಿರುವ ರಿಷಭ್ ಶೆಟ್ಟಿ, ಪ್ರೇಕ್ಷಕರ ಮೇಲೆ ‘ತನ್ನ ಆಲೋಚನಾ ಪ್ರಕ್ರಿಯೆಯನ್ನು ಹೇರುವುದರಲ್ಲಿ’ ನಂಬಿಕೆ ಇಡುವುದಿಲ್ಲ ಎಂದು ಹೇಳಿದರು.
ದೇವಸ್ಥಾನಕ್ಕೆ ಹೋಗುವುದು, ದೇವರನ್ನು ಪ್ರಾರ್ಥಿಸುವುದು ಮತ್ತು ಪೂಜಿಸುವುದು ಸ್ವಂತ ಅನುಭವ. ಅದನ್ನು ನೀವು ಬೇರೆಯವರೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅದು ದೇವರೊಂದಿಗಿನ ನಿಮ್ಮ ಅನುಭವ. ನಾವು ಆ ಅನುಭವವನ್ನು ಕಥೆಯ ಮೂಲಕ ನೀಡಿದ್ದೇವೆ. ಅದರಿಂದ ನೀವು ವಿಷಯಗಳನ್ನು ಹೇಗೆ ತೆಗೆದುಕೊಳ್ಳುತ್ತೀರಿ ಎಂಬುದು ನಿಮಗೆ ಮತ್ತು ನಿಮ್ಮ ಆಯ್ಕೆಗೆ ಬಿಟ್ಟದ್ದು’ ಎಂದು ಅವರು ಹೇಳಿದ್ದಾರೆ.
‘ಕಾಂತಾರ’ ಕಥೆಯು ತುಂಬಾ ಸುಲಭವಾಗಿತ್ತು. ಇದು ತಪ್ಪು ಹಾದಿಯಲ್ಲಿರುವ ಈ ವ್ಯಕ್ತಿಯ ಬಗ್ಗೆ ನೇರವಾದ ನಿರೂಪಣೆ ಹೊಂದಿತ್ತು. ಅವನು ತನ್ನ ತಪ್ಪನ್ನು ಅರಿತುಕೊಳ್ಳುತ್ತಾನೆ, ಅವನಿಗೆ ಜ್ಞಾನೋದಯವಾಗುತ್ತದೆ. ದೈವ ಅವನನ್ನು ಸರಿಯಾದ ಹಾದಿಗೆ ತರುತ್ತದೆ ಎಂದು ತಿಳಿದಿರುತ್ತದೆ ಎಂದು ಹೇಳಿದರು.
‘ಆದರೆ ‘ಕಾಂತಾರ: ಚಾಪ್ಟರ್ 1 ಬೆರ್ಮೆ ಇಲ್ಲಿಗೆ ಏಕೆ ಬಂದಿದ್ದಾನೆ? ಅವನ ಮತ್ತು ಮೊದಲ ರಾಜ ವಿಜಯೇಂದ್ರ ನಡುವಿನ ಸಂಬಂಧ ಹೇಗಿದೆ? ಅದನ್ನೆಲ್ಲ ತೆರೆ ಮೇಲೆ ತರುವುದು ತುಂಬಾ ಕಷ್ಟಕರವಾಗಿತ್ತು. ಈ ಚಿತ್ರವನ್ನು ತಯಾರಿಸಲು ಹಗಲು ರಾತ್ರಿ ಎನ್ನದೆ ಕನಿಷ್ಠ ವಿರಾಮಗಳೊಂದಿಗೆ ತಂಡ ಕೆಲಸ ಮಾಡುತ್ತಿತ್ತು’ ಎಂದು ತಿಳಿಸಿದ್ದಾರೆ.
‘ನಾವು ಸಾಕಷ್ಟು ಸಂಶೋಧನೆ ಮಾಡಿದೆವು. ಬಹಳಷ್ಟು ಜನರೊಂದಿಗೆ ಮಾತನಾಡಿದೆವು. ಕೆಲವು ಮಾಹಿತಿಯನ್ನು ಸಂಗ್ರಹಿಸಿ ಅದನ್ನೆಲ್ಲ ಕಥೆಯಲ್ಲಿ ಸೇರಿಸಿದೆವು. ಪಾತ್ರಗಳು ವರ್ಣಮಯ ಮತ್ತು ವಾಸ್ತವವಾಗಿ ಕಾಣುವಂತೆ ನಾವು ಪ್ರಯತ್ನಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
‘ಕಾಂತಾರ’ ಜಗತ್ತಿನಲ್ಲಿ ಹೇಳಲು ಬಹಳಷ್ಟು ಕಥೆಗಳಿವೆ. ಅದನ್ನು ಯಾವಾಗ ಮತ್ತು ಹೇಗೆ ಮಾಡುತ್ತೇನೆಂದು ನನಗೆ ತಿಳಿದಿಲ್ಲ. ಮುಂದಿನ ವರ್ಷ ಹೊಸ ಚಿತ್ರ ‘ಜೈ ಹನುಮಾನ್’ ಕೆಲಸ ಪ್ರಾರಂಭಿಸುವುದಾಗಿ ರಿಷಬ್ ಹೇಳಿದ್ದಾರೆ.





Be the first to comment