ನಿದ್ರಾದೇವಿ Next door

Movie Review: ಕನಸಲ್ಲ ಇದು ವಾಸ್ತವ ಲೋಕ!

ಚಿತ್ರ: ನಿದ್ರಾದೇವಿ Next door
ನಿರ್ದೇಶನ: ಸುರಾಗ್ ಸಾಗರ್
ನಿರ್ಮಾಣ: ಸುರಾಮ್ ಮೂವೀಸ್
ತಾರಾಗಣ: ಪ್ರವೀರ್ ಶೆಟ್ಟಿ, ಶ್ರುತಿ ಹರಿಹರನ್, ರಿಷಿಕಾ ನಾಯಕ್ ಮೊದಲಾದವರು…
ರೇಟಿಂಗ್: 3.5/5

ಅವಳೆಂದರೆ ಸೊಬಗು.‌ ಕಂಠದಲ್ಲೊಂದು ಮುಗ್ದ ಮಾಧುರ್ಯ. ಅವನು ಕನಸು ಕಾಣುತ್ತಿದ್ದ ನಿದ್ರಾದೇವಿಗೆ ಈಕೆಯದೇ ಮುಖ. ಇಷ್ಟಕ್ಕೂ ಅವನಿಗೇಕೆ ನಿದ್ರಾದೇವಿಯ ಕನಸು? ಯಾಕೆಂದರೆ ನಿದ್ದೆ ಎಂದರೆ ಆತನಿಗೆ ಮರೀಚಿಕೆ. ಹೀಗಾಗಿಯೇ ಸದಾ ನಿದ್ರಾದೇವಿಯದೇ ಕನವರಿಕೆ. ಕಾಲ್ಪನಿಕತೆಯ ಗಡಿ ದಾಟುವಂತೆ ಮೂಡಿರುವ ಚಿತ್ರವೇ ನಿದ್ರಾದೇವಿ ನೆಕ್ಸ್ಟ್ ಡೋರ್.

ಧ್ರುವ ಹೀಗೆ ನಿದ್ದೆಗೆಡಲು ಕಾರಣ ಬಾಲ್ಯದಲ್ಲಿ ನಡೆದಂಥ ಆ ಘಟನೆಗಳು. ಇವತ್ತು ಕ್ರಿಕೆಟ್ ಕೋಚ್ ಆಗಿರುವ ಈ ಹುಡುಗ ಶಾಲಾ ಬಾಲಕನಾಗಿದ್ದಾಗಲೇ ಕ್ರಿಕೆಟ್ ಆಟದಲ್ಲಿ ಎತ್ತಿದ ಕೈ. ಜೋರಾಗಿ ಹೊಡೆದ ಚೆಂಡಿನ ಏಟಿನಿಂದಾಗಿಯೇ ಪ್ರಾಣ ಕಳೆದುಕೊಂಡ ನಾಯಿ ಬ್ರೂನೋದಿಂದ ಈತನ ದುರಂತ ಕಥೆ ಶುರು. ನಾಯಿಗಿಂತಲೂ ಆತ್ಮೀಯವಾಗಿದ್ದ ಆ ನಾಯಿಯ ಒಡತಿ, ಸ್ನೇಹಿತೆ ಆದ್ಯ ಕೂಡ ಅಪಘಾತದಲ್ಲಿ ಸಾವಾಗುತ್ತಾಳೆ. ನೀನು ಯಾರನ್ನು ಇಷ್ಟ ಪಡುತ್ತೀಯೋ ಅವರೆಲ್ಲ ಸಾಯುತ್ತಾರೆ ಅಂತಾನೇ ವಿಶ್ವಾಸ್ ಎನ್ನುವ ಹುಡುಗ. ಆ ಹುಡುಗನ ಕೊಂಕು ಮಾತು ಧ್ರುವನ ಎದೆಯಲ್ಲಿ ನಾಟುತ್ತದೆ. ಟೀನೇಜ್ ಗೆ ಕಾಲಿಡುತ್ತಿದ್ದ ಹಾಗೆ ಪ್ರೀತಿಯ ತಾಯಿಯ ಸಾವೂ ಆಗುತ್ತದೆ. ಈ ಎಲ್ಲ ದುರಂತಗಳು ನಿದ್ದೆಗೆಡುವಂತೆ ಮಾಡುತ್ತದೆ. ನಿದ್ದೆಗೆಟ್ಟ ಧ್ರುವ ವೈದ್ಯರ ಬಳಿಗೆ ಹೋಗುತ್ತಾನೆ. ವೈದ್ಯಕೀಯ ಸಲಹೆಗಳು ಕೂಡ ಧ್ರುವನಿಗೆ ಯಾವುದೇ ಪರಿಹಾರ ನೀಡುವುದಿಲ್ಲ. ಇದೇ ಸಂದರ್ಭದಲ್ಲೇ ಪಕ್ಕದ್ಮನೆ ಹುಡುಗಿಯ ಪರಿಚಯವಾಗುತ್ತದೆ. ತನ್ನನ್ನು ಸಾವಿನಿಂದ ಕಾಪಾಡಿದ ಆ ಸುಂದರಿಯೇ ತನ್ನ‌ ಪಾಲಿನ‌‌ ನಿದ್ರಾದೇವಿ ಎಂದು ನಿರ್ಧರಿಸುತ್ತಾನೆ ಧ್ರುವ. ಆದರೆ ಧ್ರುವನ ನಿದ್ದೆಯ ಕಾಯಿಲೆಗೆ ನ ನಿಜವಾದ ಪರಿಹಾರ ಏನು ಎನ್ನುವುದೇ ಚಿತ್ರದ ಪ್ರಮುಖ ಅಂಶ.

ಚಿತ್ರದ ನಾಯಕ ಧ್ರುವನ ಪಾತ್ರಕ್ಕೆ ಪ್ರವೀರ್ ಶೆಟ್ಟಿ ನ್ಯಾಯ ಒದಗಿಸಿದ್ದಾರೆ. ನಿದ್ದೆಯ ಸಮಸ್ಯೆ ಹೇಗಿರುತ್ತದೆ ಎನ್ನುವುದನ್ನು ತನ್ನ ನಟನೆಯಿಂದ ಸಾಬೀತು ಮಾಡಿದ್ದಾರೆ.‌ ಧ್ರುವನ ನಿದ್ರಾ ದೇವತೆಯಾಗಿ ರಿಷಿಕಾ ನಾಯಕ್ ನಟಿಸಿದ್ದಾರೆ. ಮನೋವೈದ್ಯೆಯಾಗಿ ಶ್ರುತಿ ಹರಿಹರನ್ ನಟನೆ ನೆನಪಲ್ಲಿ ಉಳಿಯುವಂತಿದೆ. ಧ್ರುವನ ತಾಯಿಯಾಗಿ ಸುಧಾರಾಣಿ ಅಭಿನಯಿಸಿದ್ದಾರೆ. ಖಳಛಾಯೆಯ ಪಾತ್ರಕ್ಕೆ ಶೈನ್ ಶೆಟ್ಟಿ ಜೀವ ತುಂಬಿದ್ದಾರೆ.

ಇದು ಪ್ರೇಕ್ಷಕರನ್ನು ಚಿಂತಿಸುವಂತೆ ಮಾಡುವ ಸಿನಿಮಾ. ಬಾಲ್ಯದ ನೆಗೆಟಿವ್ ಘಟನೆಗಳ ಪ್ರಭಾವದಿಂದ ಹೇಗೆ ಹೊರಗೆ ಬರಬೇಕು ಎನ್ನುವುದನ್ನು ಸಾರುವಂಥ ಸಿನಿಮಾ. ಹೀಗಾಗಿಯೇ ಇದೊಂದು ಮನರಂಜನಾತ್ಮಕ ಚಿತ್ರ ಎನ್ನುವುದರ ಜತೆಯಲ್ಲೇ ಬೌದ್ಧಿಕ ಪರಿಶೀಲನೆಯ ಸಿನಿಮಾ ಎಂದು ಕೂಡ ಹೇಳಬಹುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!