ಬಹು ನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ಚಿತ್ರದ ಕೇರಳದ ವಿತರಣಾ ಹಕ್ಕನ್ನು ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಪಡೆದಿದ್ದಾರೆ.
ಈ ಹಿಂದೆ ಕೆಜಿಎಫ್ ಚಿತ್ರವನ್ನು ಮಲಯಾಳಂ ನಲ್ಲಿ ಬಿಡುಗಡೆ ಮಾಡಿದ್ದ ನಟ ನಿರ್ಮಾಪಕ, ನಿರ್ದೇಶಕ ಪೃಥ್ವಿರಾಜ್ ‘ಕಾಂತಾರ ಚಾಪ್ಟರ್ 1’ ಚಿತ್ರವನ್ನು ಕೇರಳದಲ್ಲಿ ತೆರೆಗೆ ತರುತ್ತಿದ್ದಾರೆ. ಹೊಂಬಾಳೆ ನಿರ್ಮಾಣ ಮಾಡಿದ್ದ ‘ಕೆಜಿಎಫ್’, ‘ಕೆಜಿಎಫ್ 2’ ಮತ್ತು ‘ಕಾಂತಾರ’ ಸಿನಿಮಾಗಳ ಕೇರಳ ರಾಜ್ಯ ವಿತರಣೆ ಹಕ್ಕನ್ನು ಈ ಹಿಂದೆ ಪೃಥ್ವಿರಾಜ್ ಸುಕುಮಾರನ್ ಖರೀದಿ ಮಾಡಿದ್ದರು.
‘ಕಾಂತಾರ ಚಾಪ್ಟರ್ 1’ ಸಿನಿಮಾ ಪ್ಯಾನ್ ಇಂಡಿಯಾ ಮಾತ್ರವಲ್ಲದೆ ವಿದೇಶಗಳಲ್ಲಿ ಸಹ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಇನ್ನೂ ಹಲವೆಡೆ ‘ಕಾಂತಾರ ಚಾಪ್ಟರ್ 1’ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ವಿದೇಶದ ವಿತರಣೆ ಹಕ್ಕನ್ನು ದೊಡ್ಡ ಮೊತ್ತಕ್ಕೆ ಹೊಂಬಾಳೆ ಫಿಲಮ್ಸ್ ಮಾರಾಟ ಮಾಡಿದೆ ಎಂದು ಹೇಳಲಾಗಿದೆ.
ಉತ್ತರ ಭಾರತದ ಬಿಡುಗಡೆ ಹಕ್ಕನ್ನು ಈ ಹಿಂದೆ ಹೊಂಬಾಳೆಯ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಿದ್ದ ಅನಿಲ್ ಟಂಡಾನಿ ಬಿಡುಗಡೆ ಮಾಡಲಿದ್ದಾರೆ. ಕೆಲ ರಾಜ್ಯಗಳ ಬಿಡುಗಡೆ ಹಕ್ಕುಗಳ ಮಾರಾಟಕ್ಕೆ ಹೊಂಬಾಳೆ ಫಿಲಮ್ಸ್ ಮಾತುಕತೆ ನಡೆಸುತ್ತಿದೆ. ಕರ್ನಾಟಕದಲ್ಲಿ ಸ್ವತಃ ಹೊಂಬಾಳೆ ವಿತರಣೆ ಮಾಡಲಿದೆ.
ನಟ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ಕಾಂತಾರ ಚಾಪ್ಟರ್ 1 ಚಿತ್ರ ಅಕ್ಟೋಬರ್ 2 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕಾಗಿ ಕೆಲವು ಹಾಲಿವುಡ್ ತಂತ್ರಜ್ಞರು ಕೆಲಸ ಮಾಡಿದ್ದಾರೆ.
ಸಿನಿಮಾದ ಕೊನೆಯ ಪ್ರಿಂಟ್ ಬಹುತೇಕ ರೆಡಿಯಾಗಿದ್ದು ಸಿನಿಮಾದ ಪ್ರಚಾರ ಕಾರ್ಯ ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ.





Be the first to comment