ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ ನವೀನ್ ಶಂಕರ್ ಕಥೆಗಳ ಆಯ್ಕೆಗಳೇ ವಿಭಿನ್ನ. ಪ್ರತಿ ಸಿನಿಮಾದಲ್ಲಿಯೂ ತಾವು ಎಂಥ ನಟ ಅನ್ನೋದನ್ನು ಸಾಬೀತುಪಡಿಸಿಕೊಂಡು ಬರುತ್ತಿರುವ ನವೀನ್ ಈಗ ಕಾಡುವ ಕಥೆಯೊಂದಿಗೆ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಕುಲದೀಪ್ ಕಾರಿಯಪ್ಪ ಸಾರಥ್ಯದ ನೋಡಿದವರು ಏನಂತಾರೆ ಸಿನಿಮಾದಲ್ಲಿ ನವೀನ್ ಅಕ್ಷರಶಃ ಜೀವಿಸಿದ್ದಾರೆ. ಅದಕ್ಕೆ ಬಿಡುಗಡೆಯಾಗಿರುವ ಟ್ರೇಲರ್ ಉದಾಹರಣೆ. ಬಹುಮುಖ ಪ್ರತಿಭೆ ಸಾಧುಕೋಕಿಲಾ, ಹಿರಿಯ ಪತ್ರಕರ್ತರಾದ ಜೋಗಿ ನೋಡಿದವರು ಏನಂತಾರೆ ಟ್ರೇಲರ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಿನ್ನೆ ನಡೆದ ಟ್ರೇಲರ್ ಅನಾವರಣ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು.
ಇದೇ ವೇಳೆ ಸಾಧುಕೋಕಿಲಾ ಮಾತನಾಡಿ, “ಟ್ರೇಲರ್ ನೋಡಿ ಎಮೋಷನಲ್ ಆದೆ. ತಾಯಿಗಿಂತ ಪ್ರಪಂಚದಲ್ಲಿ ದೊಡ್ಡದು ಏನಿಲ್ಲ. ಮ್ಯೂಸಿಕ್ ಡೈರೆಕ್ಟರ್ ಅದ್ಭುತ ಕೆಲಸ ಮಾಡಿದ್ದಾರೆ. ಇದು ಕ್ರಿಯೇಟಿವ್ ಜಾನರ್ ಸಿನಿಮಾ. ಇಂತಹ ಸಿನಿಮಾಗಳಿಗೆ ಪ್ರೋತ್ಸಾಹ ದೊರಕಬೇಕು. ನೋಡಿದವರು ಏನಂತಾರೆ..ನೋಡಿದವರು ತುಂಚಾ ಚೆನ್ನಾಗಿದೆ ಎನ್ನುತ್ತಾರೆ. ಈ ಚಿತ್ರದಲ್ಲಿ ನನಗೆ ಹಾಡಿಸಿದ್ದಾರೆ. ಇಡೀ ತಂಡದ ಮೇಲೆ ನಿಮ್ಮ ಪ್ರೋತ್ಸಾಹ ಇರಲಿ” ಎಂದು ತಿಳಿಸಿದರು.
ಹಿರಿಯ ಪತ್ರಕರ್ತರಾದ ಜೋಗಿ ಮಾತನಾಡಿ, “ನೋಡಿದವರು ಏನಂತಾರೆ ಅನ್ನೋ ಡೈಲಾಗ್ ಕೇಳಿ ಬೆಳೆದವರು ನಾವು. ನೋಡಿದವರು ಏನಂತಾರೆ ಎಂಬುದು ಭಾರತದ ಮಿಡಲ್ ಕ್ಲಾಸ್ ಅನ್ನು ಒಂದು ಚೌಕಟ್ಟಿನಲ್ಲಿರಿಸಿರುವ ಫೇಸ್. ನಾವು ನಮಗೋಸ್ಕರ ಬದುಕುತ್ತಿದ್ದೇವೋ? ಇಲ್ಲ ಇನ್ಯಾರಿಗೋಸ್ಕರ ಬದುಕುತ್ತಿದ್ದೇವೋ? ಅನ್ನುವಂತೆ ಮಾಡುತ್ತದೆ. ಕಳೆದ ಕೆಲ ವರ್ಷಗಳಿಂದ ಇದೆಲ್ಲವೂ ಬದಲಾಗಿದೆ. ಯಾರು ಏನಾದ್ರೂ ಹೇಳಲಿ. ನನ್ನ ಲೈಫ್ ನನ್ನದು. ನಾನು ಬದುಕುತ್ತೇನೆ ಎಂದು ಹೇಳಿಕೊಟ್ಟಿದ್ದು ಟೆಕ್ನಾಲಜಿ. ಈ ರೀತಿ ಕಥೆಗಳನ್ನು ನೋಡಿದಾಗ ನನ್ನ ಮನಸಿನಲ್ಲಿ ಒಂದು ಕಥೆ ಹುಟ್ಟುತ್ತದೆ. ಈ ಕಥೆಯಲ್ಲಿ ಹಳ್ಳಿ, ಬಾಲ್ಯ, ಸಿಟಿ ಜೀವನವಿದೆ. ಟ್ರೇಲರ್ ಕೊನೆ ಶಾರ್ಟ್ ನೋಡಿದಾಗ ಅನಿಸಿತು. ಅದಕ್ಕಾಗಿ ನವೀನ್ ಅವರು ಎಷ್ಟು ಕಷ್ಟಪಟ್ಟಿರಬಹುದು ಎನಿಸಿತು” ಎಂದು ಹೇಳಿದರು.
ನಿರ್ದೇಶಕ ಕುಲದೀಪ್ ಕಾರಿಯಪ್ಪ ಮಾತನಾಡಿ, ಈ ಕಥೆ ಸಿನಿಮಾವಾಗಲೂ ಕಾರಣರಾದವರು ನನ್ನ ಸ್ನೇಹಿತ ನಾಗೇಶ್. ಜೋಗಿ ಸರ್ ಹೇಳಿದರು ಹೆಸ್ರು ಬೇಕು ಎಂದು ಕೆಲವರು ನಿರ್ಮಾಣ ಮಾಡಲು ಬರುತ್ತಾರೆ ಎಂದು. ನಾನು ಕೇಳಿದ್ದಕ್ಕೆ ನನಗೋಸ್ಕರ, ಈ ಚಿತ್ರಕ್ಕೆ ತಂದೆ ಸ್ಥಾನದಲ್ಲಿ ನಿಂತು ದಡ ಮುಟ್ಟಿಸಿರುವುದು ನಾಗೇಶ್. ನಾನು ಬರೆಯಬೇಕಾದರೆ ಪಾತ್ರ ಹೀಗೆ ಬರಬೇಕು. ಹಾಗೇ ಬರಬೇಕು ಎಂಬ ಅಂದಾಜು ಇರುತ್ತದೆ. ಅದಕ್ಕೆ ಕಲಾವಿದರು ಜೀವ ತುಂಬಿದ್ದಾರೆ. ಎಲ್ಲರಿಂದ ಈ ಸಿನಿಮಾವಾಗಿದೆ” ಎಂದು ಹೇಳಿದರು.
ನಟ ನವೀನ್ ಶಂಕರ್ ಮಾತನಾಡಿ, ಹೊಂದಿಸಿ ಬರೆಯಿರಿ ಸಿನಿಮಾಗೂ ಮೊದಲು ಹೇಳಿದ ಕಥೆ ನೋಡಿದವರು ಏನಂತಾರೆ. ಕುಲುದೀಪ್ ಹೇಳಿದ ಕಥೆ ಬಹಳ ಕಾಡಿತ್ತು. ಹಣ ಸಂಪಾದನೆಗಿಂತ ಜನಕ್ಕೆ ಈ ಚಿತ್ರ ಇಷ್ಟ ಆಗಬೇಕು ಎಂದು ನಿರ್ಮಾಪಕರು ಹೇಳುತ್ತಾರೆ. ಅಪೂರ್ವ ಜೊತೆ ನಟಿಸಿದ್ದು ಖುಷಿ ಇದೆ. ಅಶ್ವಿನ್ ಸರ್ ಸಿನಿಮಾಟೋಗ್ರಾಫಿ ಸುಂದರವಾಗಿದೆ. ನಮ್ಮ ಕನಸು, ಗುರಿ ಬಗ್ಗೆ ಸಿನಿಮಾ ಮಾತನಾಡುತ್ತದೆ. ಒಂದು ಕಿರು ಕಾದಂಬರಿ ಓದಿದಾಗ ಒಂದು ಅನುಭವ ಕೊಡುತ್ತದೆ. ಆ ಅನುಭವವನ್ನು ಈ ಚಿತ್ರ ಕೊಡುತ್ತದೆ. ಪ್ರತಿ ಸಿನಿಮಾದಲ್ಲಿಯೂ ನನ್ನ ಬೆನ್ನುತಟ್ಟಿದ್ದೀರಾ. ಈ ಚಿತ್ರಕ್ಕೆ ನಿಮ್ಮ ಬೆಂಬಲ ಇರಲಿದೆ” ಎಂದು ಹೇಳಿದರು.
ಭಾವನಾತ್ಮಕ ಚೌಕಟ್ಟಿನಲ್ಲಿ ಸಾಗುವ ನೋಡಿದವರು ಏನಂತಾರೆ ಸಿನಿಮಾದಲ್ಲಿ ನವೀಶ್ ಶಂಕರ್ ಸಿದ್ದಾರ್ಥ್ ದೇವಯ್ಯನಾಗಿ ನಟಿಸಿದ್ದು, ಅಪೂರ್ವ ಭಾರದ್ವಾಜ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ನಾಗೇಶ್ ಗೋಪಾಲ್ ನಿರ್ಮಾಣದ ಈ ಚಿತ್ರಕ್ಕೆ ಮಯೂರೆಶ್ ಸಂಗೀತ ಒದಗಿಸಿದ್ದು, ಅಶ್ವಿನ್ ಕ್ಯಾಮೆರಾ ಹಿಡಿದ್ದಾರೆ. ಕುಲದೀಪ್ ಕಾರಿಯಪ್ಪ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಕುಲದೀಪ್ ಕಾರಿಯಪ್ಪ ಅವರ ಜೊತೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್ ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ. ಖ್ಯಾತ ಲೇಖಕ ಹಾಗು ಸಾಹಿತಿ ಜಯಂತ್ ಕಾಯ್ಕಿಣಿ ಎರಡು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಒಂದು ಹಾಡಿಗೆ ಲೈಲಾ ಪದ ಪೊಣಿಸಿದ್ದಾರೆ. ಸಾಧು ಕೋಕಿಲ, ಅನನ್ಯಾ ಭಟ್ ಮತ್ತು ಕೀರ್ತನ್ ಹೊಳ್ಳಾ ಹಾಗೂ ಅಮೇರಿಕಾದ ಗಾಯಕ ಜೋರ್ಡನ್ ರಾಬರ್ಟ್ ಕಿರ್ಕ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಪ್ರೀತಿ, ಸ್ನೇಹ, ತ್ಯಾಗ, ಸೆಂಟಿಮೆಂಟ್, ಎಮೋಷನ್ ಒಳಗೊಂಡಿರುವ ನೋಡಿದವರು ಏನಂತಾರೆ ಸಿನಿಮಾ ಇದೇ ತಿಂಗಳ 31ರಂದು ಬಿಡುಗಡೆಯಾಗಲಿದೆ.
Be the first to comment