ಬಹುತೇಕ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಿರುವ ನೆನಪಿರಲಿ ಪ್ರೇಮ್, ಪೊಲೀಸ್ ಅಧಿಕಾರಿಯಾಗಿ ತೆರೆ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ.
ಹೊಸ ಸಿನಿಮಾದಲ್ಲಿ ಖಾಕಿ ಸಮವಸ್ತ್ರ ಧರಿಸಿ ನೆನಪಿರಲಿ ಪ್ರೇಮ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಪ್ರೇಮ್ ಅವರ ಹುಟ್ಟುಹಬ್ಬದಂದು ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಇದು ಪ್ರೇಮ್ 28ನೇ ಸಿನಿಮಾ ಆಗಿದ್ದು,’Be in Peace or He’ll pierce– Rebranding Prem 2.0′ ಎಂದು ನಮೂದಿಸಿರುವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮುಹೂರ್ತ ಕಾರ್ಯಕ್ರಮದಲ್ಲಿ ಚಿತ್ರದ ಕುರಿತು ಹೆಚ್ಚಿನ ವಿವರಗಳನ್ನು ಚಿತ್ರತಂಡ ಬಹಿರಂಗ ಪಡಿಸಲಿದೆ.
ಚಿತ್ರವನ್ನು ತೇಜೇಶ್ ಬಿಕೆ ನಿರ್ದೇಶಿಸಲಿದ್ದು, ಇದೇ ಮೊದಲ ಬಾರಿಗೆ ಅವರು ನಿರ್ದೇಶಕನ ಕ್ಯಾಪ್ ತೊಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ತೇಜೇಶ್ ನಿರ್ದೇಶಕನ ತರಬೇತಿ ಪಡೆದ ನಂತರ, ಜಾಹೀರಾತು ನಿರ್ದೇಶನದ ಅನುಭವ ಗಳಿಸಿದ್ದಾರೆ.
Pentrix Entertainments ಬ್ಯಾನರ್ ಅಡಿಯಲ್ಲಿ ಗೀತಾಂಜಲಿ ನಿರ್ಮಿಸಲಿರುವ ಈ ಚಿತ್ರಕ್ಕೆ ತಾತ್ಕಾಲಿಕವಾಗಿ PK 28 ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಪ್ರೇಮ್ ಜೊತೆಗೆ ಪ್ರಮುಖ ಪಾತ್ರದಲ್ಲಿ ನಟ ರಂಗಾಯಣ ರಘು ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲೇ ನಾಯಕಿ ಮತ್ತು ಉಳಿದ ಪಾತ್ರವರ್ಗವನ್ನು ಚಿತ್ರತಂಡ ಅಂತಿಮಗೊಳಿಸಲಿದೆ.
ವಾಸುಕಿ ವೈಭವ್, ಆನಂದ್ ಮೀನಾಕ್ಷಿ ಮತ್ತು ಹರೀಶ್ ಕೊಮ್ಮೆ ಅವರು ಕ್ರಮವಾಗಿ ಸಂಗೀತ ನಿರ್ದೇಶಕ, ಛಾಯಾಗ್ರಾಹಕ ಮತ್ತು ಸಂಕಲನಕಾರರಾಗಿ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ. ಏಪ್ರಿಲ್ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಜ್ಜಾಗಿದೆ.
ಈ ಹಿಂದೆ ಪ್ರೇಮ್ ಅವರು ಅರುಣ್ ದೇವಸ್ಯ ನಿರ್ಮಾಣದ ‘ ಶತ್ರು ‘ ಸಿನಿಮಾದಲ್ಲಿ ನಾಯಕ ಆಗಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
Be the first to comment