ಹೊಸ ಚಿತ್ರ ಘೋಷಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ಪುನೀತ್ ರಾಜ್ ಕುಮಾರ್ ಅಗಲಿಕೆಯ ಬಳಿಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮ ನಿರ್ಮಾಣ ಸಂಸ್ಥೆಯಿಂದ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. ಸಿನಿಮಾದ ಹೆಸರು ‘ಆಚಾರ್ ಆಂಡ್ ಕೋ’ ಆಗಿದೆ. ಇದು ಪಿಆರ್‌ಕೆ ಪ್ರೊಡಕ್ಷನ್ಸ್‌ನ ಹತ್ತನೇ ಸಿನಿಮಾ.

‘ಆಚಾರ್ ಆಂಡ್ ಕೋ’ ಸಿನಿಮಾ 60ರ ದಶಕದ ಕತೆಯನ್ನು ಹೊಂದಿದೆ. ಆ ಕಾಲದ ಬೆಂಗಳೂರನ್ನು ತೋರಿಸುವ, ಆಗಿನ ಮನುಷ್ಯ ಸಂಬಂಧವನ್ನು ಮತ್ತೆ ಕಟ್ಟಿಕೊಡುವ ಯತ್ನ ಸಿನಿಮಾ ಮಾಡಲಿದೆ. ಸಿನಿಮಾ ತಂಡದಲ್ಲಿ ಮಹಿಳೆಯರದ್ದೇ ಮುಖ್ಯ ಪಾತ್ರ ಆಗಿದೆ.

ಸಿನಿಮಾವನ್ನು ಸಿಂಧು ಶ್ರೀನಿವಾಸ ಮೂರ್ತಿ ನಿರ್ದೇಶಿಸುತ್ತಿದ್ದಾರೆ, ಸಂಗೀತ ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕಿ ಬಿಂದು ಮಾಲಿನಿ ಅವರದ್ದು. ಕ್ರಿಯೇಟಿವ್ ಪ್ರೊಡ್ಯೂಸರ್ ಡಾನ್ನಿಲಾ ಕೊರ್ರೆಯಾ, ಸ್ಟೈಲಿಸ್ಟ್ ಇಂಚರ ಸುರೇಶ್, ಸಿನಿಮಾದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಗಿದ್ದಾರೆ. ಸಿನಿಮಾದ ಸಹ ನಿರ್ಮಾಪಕ ಗುರುದತ್ ಎ ತಲ್ವಾರ್ ಆಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್, ‘ಆಚಾರ್ & ಕೋ.’ ಪಿ.ಆರ್.ಕೆ. ಪ್ರೊಡಕ್ಷನ್ಸ್ ನ 10 ನೇ ಚಿತ್ರ. 60ನೇ ದಶಕದ ಬೆಂಗಳೂರನ್ನು ನಿಮ್ಮ ಮುಂದೆ ತರಲು ಒಂದು ಪ್ರಯತ್ನ. ಇದು ನಮ್ಮ ಸಂಸ್ಥೆಯಿಂದ ಮಹಿಳಾ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಮುಂಚೂಣಿಯಲ್ಲಿ ಹಲವಾರು ಮಹಿಳೆಯರನ್ನು ಸಹ ಒಳಗೊಂಡಿದೆ” ಎಂದಿದ್ದಾರೆ.

ಪಿಆರ್‌ಕೆ ಪ್ರೊಡಕ್ಷನ್ ಬಳಿ ಬಿಡುಗಡೆಗೆ ತಯಾರಾಗಿರುವ ಮೂರು ಸಿನಿಮಾಗಳಿವೆ. ‘ಮ್ಯಾನ್ ಆಫ್‌ ದಿ ಮ್ಯಾಚ್’, ‘ಗಂಧದ ಗುಡಿ’ ‘ಓ2’ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಈಗ ‘ಆಚಾರ್ ಆಂಡ್ ಕೋ’ ಸಿನಿಮಾ ಘೋಷಿಸಲಾಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!