ಸಂಕ್ರಾಂತಿಗೆ ‘ಅವತಾರ ಪುರುಷ’ ತೆರೆಗೆ

ಶರಣ್ ನಟನೆಯ ‘ ಅವತಾರ ಪುರುಷ’ ಚಿತ್ರ ಮುಂಬರುವ ಸಂಕ್ರಾಂತಿಗೆ ರಿಲೀಸ್‌ ಆಗುವ ಸಾಧ್ಯತೆ ಇದೆ.

ಈ ಚಿತ್ರದ ಮೂಲಕ ಡಿಸೆಂಬರ್ 10 ರಂದು ಶರಣ್ 10 ಅವತಾರಗಳಲ್ಲಿ ಪ್ರೇಕ್ಷಕರ ಮುಂದೆ ಬರಬೇಕಿತ್ತು. ಆದರೆ ಅದು ಮುಂದೆ ಹೋಯಿತು. ಚಿತ್ರತಂಡ ಶೀಘ್ರವೇ ಚಿತ್ರದ ರಿಲೀಸ್ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ.

ಬಹು ತಾರಾಗಣವನ್ನು ಹೊಂದಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಆಶಿಕಾ ರಂಗನಾಥ್ ಅವರು ನಟಿಸಿದ್ದಾರೆ. ಸಾಯಿ‌ಕುಮಾರ್, ಸುಧಾರಾಣಿ, ಅಯ್ಯಪ್ಪ,ಭವ್ಯ, ಸಾಧುಕೋಕಿಲ, ಶ್ರೀನಗರ ಕಿಟ್ಟಿ‌ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

‘ಅವತಾರ ಪುರುಷ 1’ ಮತ್ತು ‘ಅವತಾರ ಪುರುಷ 2’ ಹೆಸರಿನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಎರಡೂ ಚಿತ್ರಗಳಿಗೆ ಟ್ಯಾಗ್‌ಲೈನ್ ಮಾತ್ರ ಬೇರೆ ಇಡಲಾಗುತ್ತಿದೆ. ಚಿತ್ರದ ಮೊದಲ ಭಾಗಕ್ಕೆ ಅಷ್ಟದಿಗ್ಬಂಧನ ಮಂಡಲಕ ಹಾಗೂ ಎರಡನೇ ಭಾಗಕ್ಕೆ ತ್ರಿಶಂಕು ಎನ್ನುವ ಟ್ಯಾಗ್‌ಲೈನ್ ಇಡಲಾಗಿದೆ ಎಂದು ಚಿತ್ರತಂಡ ಹೇಳಿದೆ.

ನಟ ಶರಣ್‌ ಈ ಚಿತ್ರಕ್ಕಾಗಿ ಹಲವು ವೇಷಗಳನ್ನು ಹಾಕಿದ್ದಾರೆ. ಸಿನಿಮಾಗಳ ಹೊರತಾಗಿ ನಿಜ ಜೀವನದಲ್ಲಿ ನಟಿಸಬೇಕಾದ ಸಂದರ್ಭ ಬಂದಾಗ ಏನಾಗುತ್ತದೆ ಎನ್ನುವುದು ಚಿತ್ರದ ಕಥೆ. ಚಿತ್ರದಲ್ಲಿ ಬ್ಲ್ಯಾಕ್‌ ಮ್ಯಾಜಿಕ್‌ ಕುರಿತಾದ ಒಂದಷ್ಟು ವಿಚಾರಗಳಿವೆ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೊರ್ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಲಿಯಮ್ ಡೇವಿಡ್ ಛಾಯಾಗ್ರಹಣದಲ್ಲಿ ಚಿತ್ರ ಮೂಡಿ ಬಂದಿದೆ.

ಸಿನಿಮಾ ಹಾರರ್, ಕಾಮಿಡಿ, ಎಲಿಮೆಂಟ್ ಜೊತೆಗೆ ಥ್ರಿಲ್ಲಿಂಗ್ , ಸಸ್ಪೆನ್ಸ್ , ಟ್ವಿಸ್ಟ್ ಗಳ ಹೂರಣ ಹೊಂದಿದೆ. ಕೆಜಿಎಫ್‌ ಸಿನಿಮಾದ ಯಶಸ್ಸಿನ ಸೂತ್ರ ಅಳವಡಿಸಿಕೊಳ್ಳುತ್ತಿರುವ ಚಿತ್ರತಂಡ ದೊಡ್ಡ ಮಟ್ಟದಲ್ಲೇ ಈ ಚಿತ್ರದ ಬಗ್ಗೆ ಯೋಜನೆ ಹಾಕಿಕೊಂಡಿದೆ. ಈ ಚಿತ್ರ ಶರಣ್ ಅವರಿಗೆ ಹೊಸ ಮೈಲೇಜ್ ನೀಡುವ ಭರವಸೆಯನ್ನು ಚಿತ್ರತಂಡ ಹೊಂದಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!