ಎಂಇಎಸ್ ಕಾರ್ಯಕರ್ತರು ಕನ್ನಡ ಧ್ವಜ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್ ನಟರಾದ ಸುದೀಪ್, ಯಶ್ ಅವರು ತುಟಿ ಬಿಚ್ಚದ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಎಂಇಎಸ್ ಪುಂಡಾಟಿಕೆ ವಿರುದ್ಧ ಶಿವರಾಜ್ ಕುಮಾರ್, ಜಗ್ಗೇಶ್, ಗಣೇಶ್ , ದುನಿಯಾ ವಿಜಯ್ ಸೇರಿದಂತೆ ಹಲವು ಕಲಾವಿದರು ಧ್ವನಿಯೆತ್ತಿದ್ದಾರೆ. ಆದರೆ ಈ ಬಗ್ಗೆ ಸುದೀಪ್, ಯಶ್ ಅವರು ಏನನ್ನೂ ಮಾತನಾಡದೆ ಇರುವುದು ಚರ್ಚೆಗೆ ಕಾರಣವಾಗಿದೆ.
ಸುದೀಪ್, ಯಶ್ ಈ ಇಬ್ಬರು ನಟರಿಗೆ ಮಹಾರಾಷ್ಟ್ರದ ಗಡಿಯಲ್ಲಿ ಅಭಿಮಾನಿಗಳು ಹೆಚ್ಚಾಗಿ ಇದ್ದಾರೆ. ಈ ಕಾರಣಕ್ಕೆ ಈ ನಟರು ಕನ್ನಡದ ಪರವಾಗಿ ಧ್ವನಿ ಎತ್ತುತ್ತಿಲ್ಲ ಎನ್ನುವ ಚರ್ಚೆ ನಡೆಯುತ್ತಿದೆ.
ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಪ್ರಕರಣದ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದರೂ, ಸೂಪರ್ ಸ್ಟಾರ್‌ಗಳಾದ ಯಶ್ ಮತ್ತು ಸುದೀಪ್ ಮೌನ ವಹಿಸಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ನಟ ಯಶ್ ಮತ್ತು ಸುದೀಪ್ ನಡೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದಿದ್ದನ್ನು ಖಂಡಿಸಿದ ಎಂಇಎಸ್ ಕಾರ್ಯಕರ್ತರು ಕನ್ನಡ ಧ್ವಜವನ್ನು ಸುಟ್ಟು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಬಳಿಕ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು “ಮುಂದೆ ಕನ್ನಡಿಗರ ಮನೆಗೆ ಬೆಂಕಿ ಇಡುತ್ತೇವೆ” ಎಂದು ಹೇಳಿಕೊಂಡಿದ್ದರು. ಈ ಕೃತ್ಯವನ್ನು ಕನ್ನಡದ ಬಹುತೇಕ ಕಲಾವಿದರು ವಿರೋಧಿಸಿದ್ದು ಶಿವರಾಜಕುಮಾರ್ ನೇತೃತ್ವದಲ್ಲಿ ಹೋರಾಟ ನಡೆಸಬೇಕಿದೆ ಎನ್ನುವ ಕೂಗು ಕೇಳಿಬಂದಿದೆ.
____






Be the first to comment