ಸ್ಯಾಂಡಲ್ವುಡ್ನಲ್ಲಿ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಚಿತ್ರಗಳಿಂದಲೇ ತಮ್ಮ ಟ್ರೆಂಡ್ ಸೃಷ್ಟಿಸಿರುವ ನಿರ್ದೇಶಕ ಸುನೀಲ್ಕುಮಾರ್ ದೇಸಾಯಿ ಅವರು ನಿರ್ದೇಶಿಸಿರುವ ಮತ್ತೊಂದು ಕುತೂಹಲಭರಿತ ಚಿತ್ರ ಉದ್ಘರ್ಷ. ಈ ಚಿತ್ರವು ಈಗಾಗಲೇ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು ಮಡಿಕೇರಿಯ ಶುಂಠಿಕೊಪ್ಪ ಗ್ರಾಮದ ಸಮೀಪವಿರುವ ಎಸ್ಟೇಟ್ನಲ್ಲಿ ಚಿತ್ರೀಕರಣವನ್ನು ಹಮ್ಮಿಕೊಳ್ಳಲಾಗಿತ್ತು. ಕಬಾಲಿ ಚಿತ್ರದಲ್ಲಿ ರಜನಿಯ ಮಗಳಾಗಿ ಅಭಿನಯಿಸಿರುವ ಧನ್ಯಿಕಾ ಈ ಚಿತ್ರದ ನಾಯಕಿಯಾಗಿದ್ದು ಹಾಳು ಬಿದ್ದ ಒಂಟಿ ಮನೆಯಲ್ಲಿ ತಪ್ಪಿಸಿಕೊಳ್ಳುವ ಸೀನ್ ಅನ್ನು ಚಿತ್ರೀಕರಿಸಿಕೊಳ್ಳಲಾಯಿತು.ಟಾಲಿವುಡ್ ನಟ ಅನೂಪ್ಠಾಕುರ್ಸಿಂಗ್ ಈ ಚಿತ್ರದ ನಾಯಕನಾಗಿದ್ದರೆ, ಕಬೀರ್ಸಿಂಗ್ ವಿಲನ್ ಆಗಿ ನಟಿಸಿದರೆ, ಮತ್ತೊಬ್ಬ ನಾಯಕಿಯಾಗಿ ತಾನ್ಯಹೋಪ, ವಂಶಿಕೃಷ್ಣ ಹಾಗೂ ಇತರರು ಅಭಿನಯಿಸಿದ್ದಾರೆ. ಇನ್ನು ದೇವರಾಜ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸುನೀಲ್ಕುಮಾರ್ದೇಸಾಯಿ ಮಾತನಾಡಿ, ಬಹಳ ವರ್ಷಗಳ ಗ್ಯಾಪ್ನ ನಂತರ ಈಗಿನ ಜನರೇಷನ್ಗೆ ಒಗ್ಗುವಂತಹ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಉದ್ಘರ್ಷದಲ್ಲಿ ಹೆಣೆದಿದ್ದೇನೆ, ಇದೊಂದು ಸಂಘರ್ಷದ ಕಥಾಹಂದರ ವೊಂದಿದ್ದು, ಪ್ರತಿಯೊಂದು ಪಾತ್ರಗಳ ನಡುವೆ ತಿಕ್ಕಾಟವಿದೆ. ಅದಕ್ಕೆ ಒಗ್ಗುವಂಥಹ ಪಾತ್ರಧಾರಿಗಳನ್ನು ಹುಡುಕಿ ತಂದಿದ್ದೇವೆ. ಈಗಾಗಲೇ ಮಡಿಕೇರಿಯಲ್ಲಿ ಶೇ. 70ರಷ್ಟು ಚಿತ್ರೀಕರಣ ಮುಗಿದಿದ್ದು, ಇನ್ನುಳಿದ ಚಿತ್ರೀಕರಣಕ್ಕಾಗಿ ಕೇರಳ, ಹೈದ್ರಾಬಾದ್ನತ್ತ ಪಯಣ ಬೆಳೆಸಲಿದ್ದೇವೆ ಎಂದರು.
ನಿರ್ಮಾಪಕ ದೇವರಾಜ ಮಾತನಾಡಿ, ನಾನು ಒಬ್ಬ ಉದ್ಯಮಿಯಾಗಿದ್ದು ಇದೇ ಮೊದಲ ಬಾರಿಗೆ ಉದ್ಘರ್ಷಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕನಾಗಿದ್ದೇನೆ, ದೇಸಾಯಿ ಅವರ ಸಿನಿಮಾಗಳನ್ನು ನೋಡಿದ್ದೇನೆ, ಅವರು ಚಿತ್ರೀಕರಣ ಮಾಡುವ ರೀತಿ ನನಗೆ ತುಂಬಾ ಇಷ್ಟ. ಪ್ರೇಕ್ಷಕರಂತೆ ನಾನು ಕೂಡ ಚಿತ್ರದ ಬಿಡುಗಡೆಗಾಗಿ ಕಾದು ಕುಳಿತಿದ್ದೇನೆ ಎಂದರು.
ನಾಯಕಿ ಧನ್ಯಿಕಾ ಮಾತನಾಡಿ, ಸುನೀಲ್ಕುಮಾರ್ ದೇಸಾಯಿರಂಥಹ ನಿರ್ದೇಶಕರ ಜೊತೆ ಕೆಲಸ ಮಾಡುವುದೇ ಒಂದು ದೊಡ್ಡ ಅನುಭವ. ನಾನು ಕನ್ನಡದಲ್ಲಿ ಅಭಿನಯಿಸಿರುವ ಮೊದಲ ಸಿನಿಮಾದಲ್ಲಿ ಇಂತಹ ನಿರ್ದೇಶಕರು ಸಿಕ್ಕಿರುವುದು ತುಂಬಾ ಸಂತಸವಾಗಿದೆ. ಚಿತ್ರದಲ್ಲಿ ರೇಷ್ಮಾ ಎಂಬ ಪಾತ್ರವನ್ನು ನಾನು ಮಾಡಿದ್ದೇನೆ ಎಂದು ಹೇಳಿಕೊಂಡರು. ಬೆಳದಿಂಗಳ ಬಾಲೆ, ನಿಷ್ಕರ್ಷ, ತರ್ಕದಂಥಹ ಉತ್ತಮ ಚಿತ್ರಗಳನ್ನು ನಿರ್ದೇಶಿಸಿರುವ ಸುನೀಲ್ಕುಮಾರ್ ದೇಸಾಯಿ ಅವರಿಗೆ ಉದ್ಘರ್ಷ ಚಿತ್ರವು ಕೂಡ ಹೆಸರು ತಂದುಕೊಡುವಂತಾಗಲಿ.
Pingback: sex education tv series torrent