ನ.18ಕ್ಕೆ ‘ದಿ ಫಿಲಂ ಮೇಕರ್’ ಚಿತ್ರ ಬಿಡುಗಡೆ

ಲಾಕ್ ಡೌನ್ ನಲ್ಲಿ ಸೆರೆ ಹಿಡಿಯಲಾದ ಹಲವು ವಿಶೇಷತೆಗಳಿಂದ ಕೂಡಿದ ‘ದಿ ಫಿಲಂ ಮೇಕರ್’ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಆರ್ಯ ಎಸ್ ರೆಡ್ಡಿ ನಿರ್ದೇಶನಲ್ಲಿ ಮೂಡಿ ಬಂದಿರುವ ಈ ಚಿತ್ರ ನವೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಿನಿಮಾ ಬಗೆಗಿನ ಹಲವು ವಿಶೇಷತೆಗಳನ್ನು ಹೊತ್ತು ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿದೆ.

ಕೇವಲ ಒಬ್ಬ ಪಾತ್ರಧಾರಿ ನಟಿಸಿರುವ, ಒಂದೇ ಲೊಕೇಷನ್, ಮೂರು ಜನ ಟೆಕ್ನಿಶಿಯನ್ ಗಳಿಂದ ತಯಾರಾದ ಚಿತ್ರ ‘ದಿ ಫಿಲಂ ಮೇಕರ್’. ಕನ್ನಡದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಈ ಮೂಲಕ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಪಟ್ಟಿಗೂ ಸೇರಿದೆ.ಇದೆಲ್ಲವೂ ನಿರ್ದೇಶಕ ಆರ್ಯ ಎಸ್ ರೆಡ್ಡಿ ಕನಸು. ಅದನ್ನು ಬಹಳ ಸೃಜನಾತ್ಮಕವಾಗಿ, ಯಶಸ್ವಿಯಾಗಿ ನಿಭಾಯಿಸಿ ಬಿಡುಗಡೆಯ ಹಂತಕ್ಕೆ ತಂದಿದ್ದಾರೆ. ಚಿತ್ರಕ್ಕೆ ಕಥೆ ಬರೆದು ನಿರ್ದೇಶನ, ಸಂಕಲನ ಜೊತೆಗೆ ಛಾಯಾಗ್ರಾಹಕನಾಗಿ ಸಂಪೂರ್ಣ ಜವಾಬ್ದಾರಿ ಹೊತ್ತು ಸಿನಿಮಾ ಪೂರ್ಣ ಗೊಳಿಸಿದ್ದಾರೆ.

ಲಾಕ್ ಡೌನ್ ನಿಂದಾಗಿ ಹೊರಗಡೆ ಹೋಗುವ ಹಾಗಿರಲಿಲ್ಲ. ಏನಾದ್ರು ಮಾಡಬೇಕಲ್ಲ ಎಂದಾಗ ಈ ರೀತಿ ಒಂದು ಎಕ್ಸ್ ಪಿರಿಮೆಂಟ್ ಮಾಡಲು ಪ್ಲ್ಯಾನ್ ಮಾಡಿದೆ. ಸಮಯಕ್ಕೆ ಸರಿಯಾಗಿ ಪರಿಚಿತರಾದ ನಟ ಸುನೀಲ್ ಸಿಕ್ಕರು. ಒಬ್ಬ ವ್ಯಕ್ತಿಯನ್ನಿಟ್ಟುಕೊಂಡು ಒಂದೇ ಸ್ಥಳದಲ್ಲಿ 21 ದಿನಗಳ ಕಾಲ ಈ ಚಿತ್ರವನ್ನು ಸೆರೆ ಹಿಡಿಯಲಾಗಿದೆ. 1 ಗಂಟೆ 40 ನಿಮಿಷ ಇರುವ ಈ ಚಿತ್ರ ಹಲವು ಚಿತ್ರೋತ್ಸವದಲ್ಲಿ ತೆರೆಕಂಡು ಪ್ರಶಂಸೆ ಜೊತೆಗೆ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ನಿರ್ದೇಶಕ ಆರ್ಯ ಎಸ್ ರೆಡ್ಡಿ ತಿಳಿಸಿದ್ದಾರೆ.

ಚಿತ್ರದ ಮುಖ್ಯ ಪಾತ್ರಧಾರಿ ಸುನೀಲ್ ಗೌಡ ಮಾತನಾಡಿ ನಾನು ರಂಗಭೂಮಿ ಕಲಾವಿದ. ಈ ಚಿತ್ರದಿಂದ ತುಂಬಾ ಕಲಿತಿದ್ದೇನೆ. ಸಿಂಗಲ್ ಕ್ಯಾರೆಕ್ಟರ್ ಪ್ಲೇ ಮಾಡೋದು ಅಷ್ಟು ಸುಲಭದ ಮಾತಲ್ಲ ಆರಂಭದಲ್ಲಿ ಕಷ್ಟ ಆಯ್ತು. ಆದ್ರೆ ನಿರ್ದೇಶಕರು ನನಗೆ ತುಂಬಾ ಸಹಕಾರ ನೀಡಿದ್ರು, ಟ್ರೈನ್ ಮಾಡಿದ್ರು. ಒಂದೊಳ್ಳೆ ಪ್ರಯತ್ನ, ಪ್ರಯೋಗವನ್ನು ಈ ಚಿತ್ರದಲ್ಲಿ ಮಾಡಿದ್ದೇವೆ. ನಿರ್ದೇಶಕರಿಗೆ ಅವಕಾಶ ನೀಡಿದಕ್ಕೆ ನಾನು ಥ್ಯಾಂಕ್ಸ್ ಹೇಳುತ್ತೇನೆ ಎಂದು ಸುನೀಲ್ ತಿಳಿಸಿದ್ದಾರೆ.

ನಿರ್ದೇಶಕ ಆರ್ಯ ಎಸ್ ರೆಡ್ಡಿ ಈ ಚಿತ್ರವನ್ನು ಸ್ನೇಹಿತರೊಡಗೂಡಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿಶಾಲ್ ಆಲಾಪ್ ಸಂಗೀತ ನಿರ್ದೇಶನ, ವಿಶ್ವಾಸ್ ಕೌಶಿಕ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಸಾಕಷ್ಟು ವಿಶೇಷತೆ ಹೊತ್ತ ಈ ಚಿತ್ರ ನವೆಂಬರ್ 18ರಂದು ಬಿಡುಗಡೆಯಾಗುತ್ತಿದೆ. ಬಿಯಾಂಡ್ ಡ್ರೀಮ್ಸ್ ನಡಿ ನಂದಳಿಕೆ ನಿತ್ಯಾನಂದ ಪ್ರಭು ಈ ಸಿನಿಮಾದ ವಿತರಣೆ ಜವಾಬ್ದಾರಿ ಹೊತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!