ಮೇ 15ಕ್ಕೆ ‘ದಿ ಬೆಂಗಾಳ್ ಫೈಲ್ಸ್’ ಬಿಡುಗಡೆ

ವಿವೇಕ್ ಅಗ್ನಿಹೋತ್ರಿ ಅವರ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಮೇ 15ಕ್ಕೆ ಪಶ್ಚಿಮ ಬಂಗಾಳದಲ್ಲಿ ಬಿಡುಗಡೆಯಾಗುತ್ತಿದೆ.ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ, ಸಿನಿಮಾ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ್ದಾರೆ.

‘ದಿ ಬೆಂಗಾಲ್​ ಫೈಲ್ಸ್’ ಚಿತ್ರ 2025ರಲ್ಲೇ ದೇಶಾದ್ಯಂತ ಬಿಡುಗಡೆಯಾಗಿತ್ತು. ಆದರೆ ಪಶ್ಚಿಮ ಬಂಗಾಳದಲ್ಲಿ ಪ್ರದರ್ಶನಕ್ಕೆ ತೀವ್ರ ಅಡೆತಡೆಗಳು ಎದುರಾಗಿದ್ದವು. ಮಮತಾ ಬ್ಯಾನರ್ಜಿ ನೇತೃತ್ವದ ಅಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರ ಚಿತ್ರದ ಪ್ರದರ್ಶನಕ್ಕೆ ತಡೆ ಒಡ್ಡಿತ್ತು. ಈ ಬಗ್ಗೆ ವಿವೇಕ್ ಅಗ್ನಿಹೋತ್ರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಚಿತ್ರಮಂದಿರಗಳ ಮಾಲೀಕರಿಗೆ ಬೆದರಿಕೆ ಹಾಕಲಾಗುತ್ತಿದೆ. ಚಿತ್ರದ ವಿರುದ್ಧ ಉದ್ದೇಶಪೂರ್ವಕವಾಗಿ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂದು ಅವರು ಆರೋಪ ಮಾಡಿದ್ದರು.

‘ದಿ ಬೆಂಗಾಲ್ ಫೈಲ್ಸ್’ ಚಿತ್ರ ಪಶ್ಚಿಮ ಬಂಗಾಳದ ಇತಿಹಾಸದ ಕರಾಳ ಘಟನೆಗಳಾದ ‘ಡೈರೆಕ್ಟ್ ಆಕ್ಷನ್ ಡೇ’ ಮತ್ತು ನೋಖಾಲಿ ದಂಗೆಗಳ ಸುತ್ತ ಹೆಣೆಯಲಾದ ಕಥೆಯನ್ನು ಹೊಂದಿದೆ. ಈ ಚಿತ್ರ ಪ್ರಚೋದನಾತ್ಮಕವಾಗಿದೆ ಎಂಬ ಟೀಕೆಗಳು ಒಂದು ಕಡೆಯಾದರೆ, ಇದು ಇತಿಹಾಸವನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಮತ್ತೊಂದು ವರ್ಗದ ಪ್ರೇಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 15 ವರ್ಷ ಆಳಿದ ಟಿಎಂಸಿ ಸರ್ಕಾರ ಅಧಿಕಾರ ಕಳೆದುಕೊಂಡ ಬಳಿಕ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ. ಈ ಸಂದರ್ಭದಲ್ಲಿ ” ದಿ ಬೆಂಗಾಲ್ ಫೈಲ್ಸ್ ” ಸಿನಿಮಾ ಬಿಡುಗಡೆಯಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!