ಕನ್ನಡದ ಖ್ಯಾತ ನಟಿ, ‘ಬಿಗ್ ಬಾಸ್’ ಖ್ಯಾತಿಯ ಶುಭಾ ಪೂಂಜಾ ಅವರ ವೈವಾಹಿಕ ಬದುಕು ಮದುವೆಯಾದ ನಾಲ್ಕೇ ವರ್ಷಕ್ಕೆ ಮುರಿದು ಬೀಳುವ ಸೂಚನೆ ಸಿಕ್ಕಿದೆ.
ಶುಭಾ ಪೂಂಜಾ ಹಾಗೂ ಅವರ ಪತಿ ಸುಮಂತ್ ಬಿಲ್ಲವ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಶುಭಾ ಪುಂಜಾ ನಾಲ್ಕು ವರ್ಷಗಳ ಹಿಂದೆ ಉದ್ಯಮಿ ಸುಮಂತ್ ಬಿಲ್ಲವ ಅವರನ್ನು ಪ್ರೀತಿಸಿ 2022ರ ಜನವರಿಯಲ್ಲಿ ಮದುವೆಯಾಗಿದ್ದರು. ಮದುವೆ ಇಬ್ಬರ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದಿತ್ತು.
ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ನೀಡುವಂತೆ ಸದ್ಯ ಅರ್ಜಿ ಸಲ್ಲಿಕೆಯಾಗಿದ್ದು, ಮುಂದಿನ ವಿಚಾರಣೆಯ ವೇಳೆ ಶುಭಾ ಪೂಂಜಾ ಮತ್ತು ಸುಮಂತ್ ಇಬ್ಬರೂ ಕೋರ್ಟ್‌ಗೆ ಹಾಜರಾಗುವ ಸಾಧ್ಯತೆ ಇದೆ. ಇಬ್ಬರ ನಡುವಿನ ವಿಚ್ಛೇದನಕ್ಕೆ ನಿಖರವಾದ ಕಾರಣವೇನು ಎಂಬುದನ್ನು ಬಹಿರಂಗಪಡಿಸಲು ಸುಮಂತ್ ನಿರಾಕರಿಸಿದ್ದಾರೆ. ಶುಭಾ ಅವರು ಸೋಶಿಯಲ್ ಮೀಡಿಯಾದಿಂದ ಪತಿ ಜೊತೆಗಿನ ಫೋಟೋ ಡಿಲೀಟ್ ಮಾಡಿದ್ದಾರೆ.
ಮದುವೆಯಾದ ಬಳಿಕ ಈ ದಂಪತಿ ಖುಷಿಯಾಗಿಯೇ ಕಾಲ ಕಳೆದಿದ್ದರು. ಆದರೆ ಈಗ ಬೇರೆ ಆಗಲು ಮುಂದಾಗಿರೋದು ಅಭಿಮಾನಿಗಳಿಗೆ ಶಾಕಿಂಗ್ ಎನಿಸಿದೆ.
ಕನ್ನಡದ ‘ಮೊಗ್ಗಿನ ಮನಸು’, ಚಂಡ, ಸ್ಲಂ ಬಾಲಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಶುಭಾ ಪೂಂಜಾ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಸಿನಿಮಾ ಅಲ್ಲದೆ ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ಶುಭಾ ಪೂಂಜಾ ತಮ್ಮ ಮುಗ್ಧ ಹಾಗೂ ಚುರುಕಿನ ನಡವಳಿಕೆಯಿಂದ ಅಪಾರ ಪ್ರೇಕ್ಷಕರ ಗಮನ ಸೆಳೆದಿದ್ದರು.
—–





Be the first to comment