ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿರುವ ನಟ ವಿಜಯ್ ಅವರಿಗೆ ಶಿವರಾಜಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಶುಭಾಶಯ ಕೋರಿರುವ ಶಿವರಾಜಕುಮಾರ್, “ಈ ಚುನಾವಣೆಯಲ್ಲಿ ನೀವು ಅರ್ಹವಾದ ಗೆಲುವು ಸಾಧಿಸಿದ್ದೀರಿ. ಟೀಕೆಗಳ ನಡುವೆಯೂ ಮೌನವಾಗಿ ನಿಮ್ಮ ಕೆಲಸದ ಮೂಲಕ ಉತ್ತರಿಸಿದ್ದೀರಿ. ಇದೇ ನಿಜವಾದ ಜಯ. ನಾನು ಹಿಂದೆ ‘ಟಿವಿಕೆ’ ಎಂದರೆ ‘Try Vijay as King’ ಎಂದು ತಮಾಷೆ ಹೇಳಿದ್ದೆ. ಇಂದು ನೀವು ನಿಜವಾಗಿಯೂ ರಾಜನಂತೆ ಎದ್ದು ನಿಂತಿದ್ದೀರಿ. ಜನರಿಗೆ ನೀಡಿದ ಭರವಸೆಗಳನ್ನು ನೆರವೇರಿಸಿ ಅಭಿವೃದ್ಧಿಯ ದಾರಿಗೆ ಮುನ್ನಡೆಯಿರಿ” ಎಂದು ಶುಭ ಹಾರೈಸಿದ್ದಾರೆ.
234 ಸದಸ್ಯರಿರುವ ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಹುಮತಕ್ಕೆ ಇನ್ನೂ 10 ಸ್ಥಾನಗಳ ಕೊರತೆಯಿದೆ. ವಿಜಯ್ ಅವರು ಕಾಂಗ್ರೆಸ್ ಜೊತೆಗೆ ಕೈ ಜೋಡಿಸುವ ಸಾಧ್ಯತೆ ಇದೆ.
ಈ ಬಾರಿಯ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಮೈತ್ರಿಕೂಟ, ಎಐಎಡಿಎಂಕೆ ಮೈತ್ರಿಕೂಟ, ವಿಜಯ್ ನೇತೃತ್ವದ ಟಿವಿಕೆ ಹಾಗೂ ಎನ್ಟಿಕೆ ಪಕ್ಷಗಳು ಸ್ಪರ್ಧೆ ನಡೆಸಿದ್ದವು.
ನಟನೆಯ ಮೂಲಕ ತಮಿಳರ ಹೃದಯ ಗೆದ್ದ ವಿಜಯ್ ಈಗ ಆ ರಾಜ್ಯದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ.





Be the first to comment