ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ರಾಜೇಂದ್ರ ಸಿಂಗ್ ಬಾಬು

ಬೆಂಗಳೂರು: ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದರು. ಸಿಎಂ ನಿರ್ಧಾರವನ್ನು ಹಿರಿಯ ನಿರ್ಮಾಪಕ ಮತ್ತು ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಸ್ವಾಗತಿಸಿದ್ದಾರೆ.

ಕಳೆದ ನಲವತ್ತು ವರ್ಷಗಳಿಂದ ಹೆಸರಘಟ್ಟ, ರಾಮನಗರ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರ ನಗರಿ ತಲೆ ಎತ್ತಲಿದೆ ಎಂಬ ಸುದ್ದಿಗಳನ್ನೇ ಕೇಳುತ್ತಾ ಬಂದಿದ್ದೆವು. ಇದೀಗ ಸಿಎಂ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸುವುದಾಗಿ ತಿಳಿಸಿದ್ಧಾರೆ. ಸಿಎಂ ಅವರ ಈ ನಿರ್ಧಾರ ನಮಗೆ ಖುಷಿ ತಂದಿದೆ. ಹಾಗಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರಾದ ಎಸ್. ಟಿ. ಸೋಮಶೇಖರ್, ಸಿ.ಸಿ. ಪಾಟೀಲ್, ಸಿ.ಪಿ. ಯೋಗೀಶ್ವರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ರಾಜೇಂದ್ರ ಬಾಬು ತಿಳಿಸಿದ್ದಾರೆ.

ಮೈಸೂರಿಗೆ 85 ವರ್ಷಗಳ ಸಿನಿಮಾ ಇತಿಹಾಸವಿದೆ. ಇಂಥಹ ಇತಿಹಾಸ ಇರುವ ನಗರಕ್ಕೆ ಚಿತ್ರನಗರಿ ಅನ್ನೋ ಮತ್ತೊಂದು ಕಿರೀಟ ಮುಡಿಗೇರಿದ್ದು, ಚಿತ್ರೋದ್ಯಮದ ಪ್ರಗತಿಗೆ ದಾರಿಯಾಗಿದೆ. ಇದರಿಂದ ಮೈಸೂರಿನ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ. ಎಂಜಿಆರ್, ರಾಜ್ ಕಪೂರ್. ಶಾಂತಾ ರಾಮ್ ಎಲ್ಲರೂ ಮೈಸೂರಿನಲ್ಲಿಯೇ ಬಿಡಾರ ಹೂಡುತ್ತಿದ್ದರು. ಮೈಸೂರಿನ ಕೇಂದ್ರ ಭಾಗದಿಂದ ಕೇವಲ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 257 ಶೂಟಿಂಗ್ ಲೋಕೇಷನ್‌ಗಳಿವೆ. 16 ಪ್ಯಾಲೇಸ್‌ಗಳಿವೆ. 5 ನದಿಗಳಿವೆ. ಹೀಗಾಗಿಯೇ ವಿಷ್ಣುವರ್ಧನ್ ಮತ್ತು ರಜನಿಕಾಂತ್ ಅವರಿಗೂ ಮೈಸೂರು ಅಂದ್ರೆ ಪಂಚಪ್ರಾಣ. ಇದೀಗ ಸರ್ಕಾರ ಇಷ್ಟೆಲ್ಲಾ ಐತಿಹ್ಯ ಇರುವ ನಗರಕ್ಕೆ ಚಿತ್ರನಗರಿ ನೀಡುತ್ತಿದೆ ಎಂದು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಮೈಸೂರು ಅರಮನೆ, ಲಲಿತ ಮಹಲ್, ಚಾಮುಂಡಿ ಬೆಟ್ಟ, ನಂಜನಗೂಡು ಶ್ರೀ ನಂಜುಂಡೇಶ್ವರ ದೇವಸ್ಥಾನ, ಮೃಗಾಲಯ, ಮೈಸೂರು ವಿಶ್ವವಿದ್ಯಾಲಯ, ಬಲಮುರಿ, ಎಡಮುರಿ, ಕೆ.ಆರ್.ಎಸ್, ತಲಕಾಡು, ಸೋಮನಾಥಪುರ, ಶಿವನಸಮುದ್ರ, ಶ್ರೀರಂಗಪಟ್ಟಣ, ಕುಕ್ಕರಹಳ್ಳಿ ಕೆರೆಯಂತಹ ಅತ್ಯುತ್ತಮ ಶೂಟಿಂಗ್ ತಾಣಗಳು ಹಾಗೂ ಮೈಸೂರು ನಗರದಲ್ಲಿರುವ ಹಲವು ಐತಿಹಾಸಿಕ ಕಟ್ಟಡಗಳು ಸಿನಿಮಾ ಶೂಟಿಂಗ್ ಗೆ ಹೇಳಿ ಮಾಡಿಸಿದಂತಿವೆ. ಜೊತೆಗೆ ಮೇರು ನಟ ಡಾ. ರಾಜ್ ಕುಮಾರ್ ಅವರು ಹೇಳೆ ಮೈಸೂರು ಭಾಗವಾಗಿದ್ದ ಚಾಮರಾಜನಗರ ಜಿಲ್ಲೆಯವರು. ಅಂಬರೀಷ್, ಡಾ. ವಿಷ್ಣುವರ್ಧನ್, ಪುಟ್ಟಣ್ಣ ಕಣಗಾಲ್, ಹಿರಿಯ ನಟ ದಿ. ಅಶ್ವಥ್ ಅವರು ಹಾಗೂ ಇಂದಿನ ಹಲವು ಯುವ ಪ್ರತಿಭೆಗಳು ಮೈಸೂರು ಮೂಲದವರಾಗಿದ್ದಾರೆ. ಚಿತ್ರರಂಗಕ್ಕೆ ತನ್ನದೇ ಆದ ವಿಶಿಷ್ಠ ಕೊಡುಗೆ ನೀಡಿರುವ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣವಾಗಬೇಕು ಎಂದು ಮೈಸೂರು ಜಿಲ್ಲೆಯ ಜನರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರು.

ಜೊತೆಗೆ ಚಿತ್ರ ನಗರಿ ನಿರ್ಮಾಣಕ್ಕಾಗಿ ಮೈಸೂರಿನಿಂದ 20 ಕಿ.ಮೀ. ದೂರದಲ್ಲಿರುವ ಹಿಮ್ಮಾವು ಸಮೀಪ 110 ಎಕರೆ ಜಾಗವನ್ನು ಕೆಐಎಡಿಬಿ ಗುರುತಿಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!