ಒಡಹುಟ್ಟಿದವಳು

‘ಮಹಾನ್’ ಚಿತ್ರದ ‘ಒಡಹುಟ್ಟಿದವಳು’ ಹಾಡಿಗೆ ಮೆಚ್ಚುಗೆ!

ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶನದ, ಆಕಾಶ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬೂದೂರು ಅವರು ನಿರ್ಮಿಸಿರುವ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ವಿಜಯ ರಾಘವೇಂದ್ರ ನಾಯಕರಾಗಿ ನಟಿಸಿರುವ “ಮಹಾನ್” ಚಿತ್ರದ “ಒಡಹುಟ್ಟಿದವಳು” ಮೊದಲ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಡಾ||ವಿ.ನಾಗೇಂದ್ರಪ್ರಸಾದ್ ಅವರು ಬರೆದಿರುವ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ ಹಾಗೂ ಸಿದ್ ಶ್ರೀರಾಮ್ – ಲಹರಿ ಹಾಡಿದ್ದಾರೆ. ಸೋದರ – ಸೋದರಿ ಬಾಂಧವ್ಯದ ಈ ಹಾಡಿಗೆ ಅಭಿಮಾನಿಗಳು ಮನ ಸೋತಿದ್ದಾರೆ. ಹಾಡಿನ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ”

ನನ್ನ 22 ವರ್ಷಗಳ ಸಿನಿ ಜರ್ನಿಯಲ್ಲಿ “ಮಹಾನ್” ಚಿತ್ರ ಒಂದು ಮೈಲಿಗಲ್ಲಾಗಲಿದೆ. ಇಂತಹ ಮನಮುಟ್ಟುವ ಚಿತ್ರವನ್ನು ಪ್ರಕಾಶ್ ಬೂದೂರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. “ಮಹಾನ್”ಎಂದರೆ ರೈತ. ಇದು ಕೂಡ ರೈತನ ಕುರಿತಾದ ಚಿತ್ರ. ಜೊತಗೆ ಅಣ್ಣ – ತಂಗಿ ಬಾಂಧವ್ಯ ಕೂಡ ಇದೆ. ಈ ಚಿತ್ರದಲ್ಲಿ ನಾಯಕನ ಪಾತ್ರ ಬರೆಯಬೇಕಾದರೆ, ನನ್ನ ಕಣ್ಣಿದುರು ಬಂದಿದ್ದೆ ವಿಜಯ ರಾಘವೇಂದ್ರ. ಅವರು ಈ ಪಾತ್ರಕ್ಕಾಗಿ ನ್ಯಾಯ ಒದಗಿಸಿದ್ದಾರೆ. ಕನ್ನಡದವರೆ ಆದ ವರ್ಷ ಬೊಳ್ಳಮ್ಮ ವಿಜಯ್ ರಾಘವೇಂದ್ರ ಅವರ ತಂಗಿಯಾಗಿ ನಟಿಸಿದ್ದಾರೆ. ಶಿವರಾಜಕುಮಾರ್ ಅವರು ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲೀಡರ್ ಚಿತ್ರದ ನಂತರ ಶಿವಣ್ಣ ಹಾಗೂ ವಿಜಯ ರಾಘವೇಂದ್ರ ಒಂದೇ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ಮಿತ್ರ ಅವರು ಸೇರಿದಂತೆ ಬಹು ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ನಾನು ಅಧ್ಯಯನ ಮಾಡಿದ ಕಾಲೇ ಜಿನ ಅಧ್ಯಾಪಕರೆ ಈ ಚಿತ್ರದ ನಿರ್ಮಾಪಕರಾಗಿರುವುದು ವಿಶೇಷ. ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಎಲ್ಲ ಹಾಡುಗಳು ಸುಮಧುರವಾಗಿ ಮೂಡಿಬಂದಿದೆ. ಇಂದು ಬಿಡುಗಡೆಯಾಗಿರುವ ಈ ಹಾಡು ಎಲ್ಲರ ಮನ ಗೆದ್ದಿದೆ. ಮುಂದೆ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕ ಪಿ.ಸಿ.ಶೇಖರ್ ಹೇಳಿದರು.

ಒಡಹುಟ್ಟಿದವಳು

ನನಗೆ ಪಿ.ಸಿ.ಶೇಖರ್ ಅವರ ಜೊತೆಗೆ ಕೆಲಸ ಮಾಡುವುದು ಬಹಳ ದಿನಗಳ ಆಸೆ. ಅವರು ನನ್ನ ಚಿತ್ರವೊಂದರ ಟ್ರೇಲರ್ ನೋಡಿ ಫೊನ್ ಮಾಡಿ ಮೆಚ್ಚುಗೆ ಸೂಚಿಸಿದರು. ನಂತರ ಈ ಚಿತ್ರದ ಕುರಿತ ನನ್ನ ಜೊತೆ ಮಾತನಾಡಿದರು. ಇದು ನಾನು ಈವರೆಗೂ ಮಾಡಿರದ ಪಾತ್ರ. ಉತ್ತಮ ಕಲಾವಿದರ ಹಾಗೂ ತಂತ್ರಜ್ಞರ ಕೆಲಸ ಮಾಡಿ ಸಂತೋಷವಾಗಿದೆ. ಇಂದು ಬಿಡುಗಡೆಯಾಗಿರುವ ಸೋದರ – ಸೋದರಿ ಬಾಂಧವ್ಯದ ಹಾಡು ನನ್ನ ಸೋದರಿ ವೀಣಾ ಅವರಿಗೆ ಬಹಳ ಇಷ್ಟವಾಗಿದೆ. ಅವರು ಇಂದು ಈ ಸಮಾರಂಭಕ್ಕೆ ಬಂದಿರುವುದು ನನಗೆ ಸಂತೋಷವಾಗಿದೆ. ಇನ್ನ, ಶಿವರಾಜಕುಮಾರ್ ಅವರ ಜೊತೆಗೆ ಅಭಿನಯಿಸಿರುವು ಸಂತೋಷವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು ನಾಯಕ ವಿಜಯ್ ರಾಘವೇಂದ್ರ.

ನಾನು ಕನ್ನಡದವಳು ಅಂತ ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಹಾಗಾಗಿ ನಾನು ಕನ್ನಡ ಚಿತ್ರದಲ್ಲಿ ನಟಿಸಲು ಹತ್ತು ವರ್ಷ ಬೇಕಾಯಿತು ಎಂದು ಮಾತನಾಡಿದ ನಟಿ ವರ್ಷ ಬೊಳ್ಳಮ್ಮ.

ಒಡಹುಟ್ಟಿದವಳು

ನಾನು ಈ ಚಿತ್ರದಲ್ಲಿ ಖಳನಟನ ಪಾತ್ರದಲ್ಲೇ ಅಭಿನಯಿಸಿದ್ದೇನೆ. ಸಾಧವಿನ ಹಾಗಿರುವ ಖೇಡಿಯ ಪಾತ್ರ. ಇಂದು ಬಿಡುಗಡೆಯಾಗಿರುವ ಹಾಡು ಕೂಡ ನನ್ನ ಮನಸ್ಸಿಗೆ ಹತ್ತಿರವಾಯಿತು ಎಂದು ನಟ ಶರತ್ ಲೋಹಿತಾಶ್ವ ತಿಳಿಸಿದರು.

“ರಾಗ” ನನಗೆ ಹೆಸರು ತಂದುಕೊಟ್ಟ ಚಿತ್ರ. ಆ ಚಿತ್ರದ ನಿರ್ದೇಶಕರು ಪಿ.ಸಿ.ಶೇಖರ್. ಬಹಳ ದಿನಗಳ ನಂತರ ಅವರೊಂದಿಗೆ ಈ ಚಿತ್ರದಲ್ಲಿ ಮತ್ತೆ ಕೆಲಸ ಮಾಡಿದ್ದೇನೆ. “ಮಹಾನ್” ನಲ್ಲೂ ನನ್ನ ಪಾತ್ರ ಚೆನ್ನಾಗಿದೆ ಎಂದು ನಟ ಮಿತ್ರ ತಿಳಿಸಿದರು. ಛಾಯಾಗ್ರಾಹಕ ವೈದಿ ಹಾಗೂ ಕಲಾ ನಿರ್ದೇಶಕ ನಟರಾಜ್ “ಮಹಾನ್” ಕುರಿತು ಮಾತನಾಡಿದರು. ನಿರ್ಮಾಪಕ ಪ್ರಕಾಶ್ ಬೂದೂರು ಎಲ್ಲರಿಗೂ ಧನ್ಯವಾದ ಹೇಳಿದರು.

ಒಡಹುಟ್ಟಿದವಳು

Be the first to comment

Leave a Reply

Your email address will not be published. Required fields are marked *

Translate »
error: Content is protected !!