ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರ ‘ಪುಷ್ಪ’ ದಿ ರೈಸ್ ಆರು ದಿನಗಳಲ್ಲೇ 200 ಕೋಟಿ ರೂ. ಸಂಪಾದಿಸುವ ಮೂಲಕ ದಾಖಲೆ ನಿರ್ಮಿಸಿದೆ.
ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಹಣ ಸಂಪಾದಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪುಷ್ಪ ಪಾತ್ರವಾಗಿದೆ. ಚಿತ್ರ ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ 173 ಕೋಟಿ ರೂ. ಗಳಿಸುವ ಮೂಲಕ ಕೊರೋನಾ ಸಮಯದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಆಂಧ್ರಪ್ರದೇಶದ ಕೆಲವು ಥಿಯೇಟರ್ ಗಳಲ್ಲಿ ಟಿಕೆಟ್‍ಗಳು 10 ರೂಪಾಯಿಗಿಂತ ಕಡಿಮೆ ಮೌಲ್ಯದಲ್ಲಿ ಮಾರಾಟವಾಗುತ್ತಿವೆ. ಇದು ಚಿತ್ರದ ಗಳಿಕೆಗೆ ಹೊಡೆತ ತಂದಿದೆ. ಆದರೂ ಪುಷ್ಪ ದೊಡ್ಡ ಪ್ರಮಾಣದಲ್ಲಿ ಹಣ ಸಂಪಾದನೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಬಾಕ್ಸ್ ಆಫೀಸ್ ಮೂಲಗಳು ಹೇಳಿವೆ.
ಈ ವಾರ ನಾನಿ ಅಭಿನಯದ ಶ್ಯಾಮ್ ಸಿಂಘ ರಾಯ್, ರಣಬೀರ್ ಸಿಂಗ್ ಅಭಿನಯದ 83 ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ’ ಪುಷ್ಪ’ ಗಳಿಕೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪುಷ್ಪ ಚಿತ್ರಕ್ಕೆ ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಕನ್ನಡದ ನಟ ಡಾಲಿ ಧನಂಜಯ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ತೆಲುಗಿನಲ್ಲಿ ನಿರ್ಮಾಣವಾಗಿದ್ದು ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಗಳಿಗೆ ಡಬ್ ಆಗಿ ತೆರೆ ಕಂಡಿದೆ.
ಪುಷ್ಪ ಚಿತ್ರದ ಮೊದಲ ಭಾಗ ಮಾತ್ರ ತೆರೆಯ ಮೇಲೆ ಬಂದಿದೆ. ಎರಡನೇ ಭಾಗ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.
ಟಾಲಿವುಡ್ನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ’ ಚಿತ್ರ ಈ ಹಿಂದೆ ಡಿಸೆಂಬರ್ ತಿಂಗಳಿನಲ್ಲಿ 100 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ನಿರ್ಮಿಸಿತ್ತು. ಬೋಯಪಟಿ ಶ್ರೀನು ನಿರ್ದೇಶನದ ‘ಅಖಂಡ’ ಚಿತ್ರ ಆಂಧ್ರದಲ್ಲಿ 60 ಕೋಟಿ ಗಳಿಸಿ ಡಿಸೆಂಬರ್ನಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎನ್ನುವ ದಾಖಲೆ ಬರೆದಿತ್ತು. ಈ ಹಿಂದೆ 2016ರಲ್ಲಿ ತೆರೆಕಂಡಿದ್ದ ರಾಮ್ ಚರಣ್ ನಟನೆಯ ‘ಧ್ರುವ’ ಚಿತ್ರ ಬಾಕ್ಸಾಫೀಸ್ನಲ್ಲಿ 58 ಕೋಟಿ ರೂಪಾಯಿ ಬಾಚಿಕೊಂಡ ಸಾಧನೆ ಮಾಡಿತ್ತು. ಈ ಎಲ್ಲಾ ದಾಖಲೆಯನ್ನು ಪುಷ್ಪ ಮುರಿಯುವಲ್ಲಿ ಯಶಸ್ವಿಯಾಗಿದೆ.
___
Be the first to comment