ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಜೀವನವನ್ನು ಆಧರಿಸಿ ನಟ ಅನಿರುದ್ಧ ಅವರು ತಯಾರಿಸಿದ ಸಾಕ್ಷ್ಯಚಿತ್ರ ‘ಬಾಳೇ ಬಂಗಾರ’ ದಾಖಲೆ ಬರೆದಿದೆ.
ಬದುಕಿರುವ ಮೇರು ನಟಿಯೊಬ್ಬರ ಕುರಿತಾದ ಅತ್ಯಂತ ದೀರ್ಘ ಕಾಲಾವಧಿಯ ಸಾಕ್ಷ್ಯಚಿತ್ರ ಎನ್ನುವ ದಾಖಲೆಗೆ ಇದು ಪಾತ್ರವಾಗಿದೆ. ಇದು 141 ನಿಮಿಷ ಹೊಂದಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲೆ ಮಾಡಿದೆ ಎಂದು ಅನಿರುದ್ಧ ತಿಳಿಸಿದ್ದಾರೆ.
“ಈ ಸಾಕ್ಷ್ಯಚಿತ್ರವನ್ನು ನೋಡಲು ನೀವು ಕಾತುರರಾಗಿದ್ದೀರಿ ಎಂದು ನನಗೆ ಗೊತ್ತು. ಅತಿ ಶೀಘ್ರದಲ್ಲೇ ನಿಮ್ಮ ನೆಚ್ಚಿನ ವೇದಿಕೆಗಳಲ್ಲಿ ಇದನ್ನು ತಾವು ನೋಡಬಹುದು…” ಎಂದು ಅನಿರುದ್ಧ ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.
ಕೀರ್ತಿ ಇನ್ನೋವೇಷನ್ಸ್ ಮೂಲಕ ನಿರ್ಮಾಣವಾದ ಸಾಕ್ಷ್ಯಚಿತ್ರಕ್ಕೆ ಅನಿರುದ್ಧ ಅವರು ನಿರ್ದೇಶನ ಮಾಡಿದ್ದಾರೆ. ಇದರ ಪರಿಕಲ್ಪನೆ, ಸಂಶೋಧನೆ, ಸ್ಕ್ರಿಪ್ಟ್ ಮತ್ತು ನಿರೂಪಣೆ ಕೂಡ ಅನಿರುದ್ಧ ಅವರದ್ದೇ.
ಭಾರತಿ ವಿಷ್ಣುವರ್ಧನ್ 150ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಅವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಈಗಾಗಲೇ ಗೌರವಿಸಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವರ ಬದುಕಿನ ವಿವರಗಳನ್ನು ‘ಬಾಳೇ ಬಂಗಾರ’ ಕಟ್ಟಿ ಕೊಡುತ್ತದೆ.
ಭಾರತಿ ವಿಷ್ಣುವರ್ಧನ್ ಅವರ ಬಗ್ಗೆ ಚಿತ್ರರಂಗದ ಅನೇಕರು ಮಾತನಾಡಿದ್ದಾರೆ. ಅನಂತ್ ನಾಗ್, ಶಿವರಾಮ್, ಭಾರ್ಗವ, ಮೋಹನ್ ಲಾಲ್, ಶಿವರಾಜ್ಕುಮಾರ್, ಹೇಮಾ ಚೌಧರಿ ಸೇರಿದಂತೆ ಚಿತ್ರರಂಗದ ಅನೇಕರ ಸಂದರ್ಶನ ಈ ಸಾಕ್ಷ್ಯಚಿತ್ರದಲ್ಲಿದೆ.
_________

Be the first to comment