ಸೂಪರ್ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಕಾಂಬಿನೇಷನ್ ನ ಹೊಸ ಸಿನಿಮಾ ‘ತಲೈವರ್ 173’ ಅಧಿಕೃತವಾಗಿ ಘೋಷಣೆಯಾಗಿದೆ.
ಕಮಲ್ ಹಾಸನ್ ಅವರ ಪ್ರಸಿದ್ಧ ಬ್ಯಾನರ್ ‘ರಾಜ್ಕಮಲ್ ಫಿಲ್ಮ್ಸ್ ಇಂಟರ್ನ್ಯಾಶನಲ್’ ಅಡಿಯಲ್ಲಿ ಈ ಬೃಹತ್ ಚಿತ್ರ ನಿರ್ಮಾಣವಾಗಲಿದೆ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಸುಂದರ್ ಸಿ ಅವರು ನಿರ್ದೇಶಿಸುತ್ತಿದ್ದಾರೆ.
‘ಜೈಲರ್ 2’ ಬಳಿಕ ರಜನಿಕಾಂತ್ ಅವರು ಕಮಲ್ ಹಾಸನ್ ನಿರ್ಮಾಣದ ‘ತಲೈವರ್ 173’ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ 2027ರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಪಾತ್ರವರ್ಗ ಮತ್ತು ತಾಂತ್ರಿಕ ತಂಡದ ಘೋಷಣೆಯ ನಿರೀಕ್ಷೆಯಲ್ಲಿ ಅಭಿಮಾನಿಗಳ ಕುತೂಹಲ ತೀವ್ರವಾಗಿದೆ.
ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರೂ ಒಟ್ಟಿಗೆ ನಿಂತಿರುವ ಫೋಟೋ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಈ ಕ್ಷಣವನ್ನು “ಐತಿಹಾಸಿಕ” ಎಂದು ಕರೆಯುತ್ತಿದ್ದಾರೆ. ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ಸ್ನೇಹ ತಮಿಳು ಚಿತ್ರರಂಗದ ಐಕಾನಿಕ್ ಬಂಧವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಶ್ಲಾಘಿಸಿದ್ದಾರೆ.
ರಜನಿಕಾಂತ್ ಇತ್ತೀಚೆಗೆ ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ ಮೂಲಕ ಭರ್ಜರಿ ಯಶಸ್ಸು ಕಂಡಿದ್ದರು. ಚಿತ್ರವು ವಿಶ್ವದಾದ್ಯಂತ 500 ಕೋಟಿ ₹ಗೂ ಹೆಚ್ಚು ಗಳಿಕೆ ಮಾಡಿ 2025ರ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಸಿನಿಮಾವಾಯಿತು. ಚಿತ್ರದಲ್ಲಿ ನಾಗಾರ್ಜುನ, ಸೌಬಿನ್ ಶಾಹಿರ್, ಶ್ರುತಿ ಹಾಸನ್, ಉಪೇಂದ್ರ , ಅಮೀರ್ ಖಾನ್ ಅವರ ತಾರಾಬಳಗವಿತ್ತು.
‘ಕೂಲಿ’ ಯಶಸ್ಸಿನ ನಂತರ ರಜನಿಕಾಂತ್ ‘ಜೈಲರ್ 2’ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. ನೆಲ್ಸನ್ ನಿರ್ದೇಶನದ ಈ ಚಿತ್ರದಲ್ಲಿ ಶಿವರಾಜ್ಕುಮಾರ್, ಮೋಹನ್ ಲಾಲ್, ಮತ್ತು ಮಿಥುನ್ ಚಕ್ರವರ್ತಿ, ನಂದಮೂರಿ ಬಾಲಕೃಷ್ಣ ತಂಡವನ್ನು ಸೇರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
—-





Be the first to comment