ದೂರದ ದುಬೈಗೆ ಹೋಗಿ ತನ್ನ ಸಂಸಾರದ ಕಷ್ಟಗಳಿಗೆ ಸ್ಪಂದಿಸಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಕನಸು ಕಾಣುವ ಕರಾವಳಿ ಯುವಕ ತನ್ನ ಕನಸನ್ನು ಈಡೇರಿಸುವ ವೇಳೆ ಎದುರಾಗುವ ಕಷ್ಟಗಳ ಕಥೆಯನ್ನು ಹೊಂದಿರುವ ಹಾಸ್ಯಮಯ ಚಿತ್ರ “ಪುರುಷೋತ್ತಮನ ಪ್ರಸಂಗ”.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಅಜಯ್ , ಬ್ಯಾಂಕಿನಲ್ಲಿ ಕೆಲಸ ಮಾಡುವ ತನ್ನ ಬಾಲ್ಯದ ಗೆಳತಿ ರಿಶಿಕಾಳನ್ನು ದುಬೈಗೆ ಹೋಗಿ ಹಣ ಸಂಪಾದನೆ ಮಾಡಿದ ಬಳಿಕ ಮದುವೆ ಆಗುವ ಆಲೋಚನೆ ಮಾಡುತ್ತಾನೆ. ಈ ವೇಳೆ ತಂದೆ ಏಜೆಂಟಿಗೆ 7 ಲಕ್ಷ ರೂಪಾಯಿ ನೀಡಲು ಮಗಳ ಮದುವೆಗೆ ಇಟ್ಟ ಹಣವನ್ನು ಮಗನಿಗೆ ನೀಡುತ್ತಾನೆ. ತನ್ನ ಕನಸಿನಂತೆ ದುಬೈಗೆ ಹಾರುವ ಪುರುಷೋತ್ತಮನಿಗೆ ದುಡ್ಡು ಸಂಪಾದನೆ ಮಾಡಲು ಆಗುತ್ತದೆಯೇ? ಪ್ರೇಯಸಿ ಜೊತೆ ಮದುವೆ ಆಗುತ್ತದೆಯೇ ಈ ಎಲ್ಲಾ ವಿಷಯಗಳಿಗೆ ಸಿನಿಮಾವನ್ನು ನೋಡಬೇಕು.
ನಾಯಕರ ಪಾತ್ರದಲ್ಲಿ ನಟಿಸಿರುವ ಅಜಯ್ ಪೃಥ್ವಿ ಕರಾವಳಿ ಭಾಷೆಯ ಸೊಗಡಿನಲ್ಲಿ ಮಾತನಾಡುವ ಯತ್ನವನ್ನು ಮಾಡಿದ್ದಾರೆ. ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ನಾಯಕಿಯ ಪಾತ್ರದಲ್ಲಿ ನಟಿಸಿರುವ ರಿಷಿಕಾ ನಾಯ್ಕ್ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನವೀನ್ ಡಿ ಪಡೀಲ್, ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ವಿಜಯ್ ಶೋಭರಾಜ್ ತಮ್ಮ ನಟನೆಯ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡುವ ಯತ್ನವನ್ನು ಮಾಡಿದ್ದಾರೆ.
ದೂರದ ಬೆಟ್ಟ ನುಣ್ಣಗೆ ಎನ್ನುವ ರೀತಿಯಲ್ಲಿ ದುಬೈ ಬದುಕಿನ ಕನಸು ಕಾಣುವ ನಾಯಕನಿಗೆ ಯಾವ ರೀತಿಯ ಸಂಕಷ್ಟಗಳು ಎದುರಾಗುತ್ತದೆ ಎನ್ನುವುದನ್ನು ನಿರ್ದೇಶಕರು ನೋವಿನ ಜೊತೆಗೆ ಹಾಸ್ಯ ಮಿಶ್ರಣದೊಂದಿಗೆ ತೆರೆಯ ಮೇಲೆ ತರುವ ಯತ್ನವನ್ನು ಮಾಡಿದ್ದಾರೆ. ಚಿತ್ರದಲ್ಲಿ ಸಂಭಾಷಣೆಗೆ ಹೆಚ್ಚು ಮಹತ್ವವನ್ನು ನೀಡಲಾಗಿದೆ. ವಿದೇಶದ ಕನಸು ಕಾಣುವವರಿಗೆ ಇಲ್ಲಿ ಸಂದೇಶವನ್ನು ಸಹ ನೀಡಲಾಗಿದೆ.
ಚಿತ್ರದ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ಛಾಯಾಗ್ರಹಕ ವಿಷ್ಣು ಪ್ರಸಾದ್ ತಮ್ಮ ಕೆಲಸದ ಮೂಲಕ ಚಿತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ.
ಹಾಸ್ಯ ಮಿಶ್ರಿತ ಕೌಟುಂಬಿಕ ಚಿತ್ರವಾಗಿ “ಪುರುಷೋತ್ತಮನ ಪ್ರಸಂಗ” ಗಮನ ಸೆಳೆಯುತ್ತದೆ.
___
Be the first to comment