ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿರುವುದು ಕನ್ನಡ ಚಿತ್ರರಂಗ, ಅಭಿಮಾನಿಗಳನ್ನು ದುಃಖದ ಸಾಗರದಲ್ಲಿ ಮುಳುಗಿಸಿದೆ. ಸದಾ ಲವಲವಿಕೆಯಿಂದ ಇದ್ದ ನಟ 46ನೆಯ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿರುವುದು ಪ್ರತಿಯೊಬ್ಬರಿಗೂ ಶಾಕ್ ನೀಡಿದೆ.
ಪುನೀತ್ ರಾಜ್ ಕುಮಾರ್ ನಿನ್ನೆ ರಾತ್ರಿ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿ ಆಗಿದ್ದರು. ನಿನ್ನೆ ರಾತ್ರಿ ಎಲ್ಲರ ಜೊತೆ ಲವಲವಿಕೆಯಿಂದ ಮಾತನಾಡಿದ್ದರು ಎಂದು ನಟ ರಮೇಶ್ ಅರವಿಂದ್ ದುಃಖದಿಂದ ನೆನಪಿಸಿಕೊಂಡಿದ್ದಾರೆ.
ಪುನೀತ್ ಇಂದು ಬೆಳಗ್ಗೆ ವರ್ಕೌಟ್ ಮಾಡಿದ್ದಾರೆ. ಅವರು ವ್ಯಾಯಾಮದಲ್ಲಿ ತೊಡಗಿಸಿಕೊಂಡ ಬಳಿಕ ಸುಸ್ತಿನಿಂದ ಕುಸಿದರು. ಕುಸಿದುಬಿದ್ದ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಯ ಮೂಲಗಳ ಪ್ರಕಾರ, ಪುನೀತ್ ಅವರನ್ನು ಆಸ್ಪತ್ರೆಗೆ ಕರೆತರುವ ವೇಳೆಗೆ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಅವರಿಗೆ ಹೃದಯಾಘಾತದ ರೀತಿಯ ಮ್ಯಾಸ್ಸಿವ್ ಸ್ಟ್ರೋಕ್ ಆಗಿದೆ ಎನ್ನುವುದು ವೈದ್ಯರ ಅಭಿಪ್ರಾಯ.
ಬಿಜಿ ಆಗಿದ್ದ ಅಪ್ಪು: ಪುನೀತ್ ಅವರು ಬಹದ್ದೂರ್ ಚೇತನ್ ನಿರ್ದೇಶನದ ಜೇಮ್ಸ್ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರು. ಈ ಚಿತ್ರದ ಪೋಸ್ಟರ್ ಕಳೆದ ಆಗಸ್ಟ್ ತಿಂಗಳಿನಲ್ಲಿ ರಿಲೀಸ್ ಆಗಿತ್ತು. ಪೋಸ್ಟರ್ ನಲ್ಲಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಪಡೆಯ ಜೊತೆ ಪುನೀತ್ ಕಾಣಿಸಿಕೊಂಡಿದ್ದರು. ಹೊಸ ಪೋಸ್ಟರ್ ದೀಪಾವಳಿ ವೇಳೆಗೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿತ್ತು.
ವಾರದ ಹಿಂದೆ ಪುನೀತ್ ತಾವು ಚಿತ್ರ ನಿರ್ದೇಶಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆ ಬಯಕೆ ಈಡೇರುವ ಮುನ್ನವೇ ಅವರು ಕಾಣದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಎರಡು ದಿನಗಳ ಹಿಂದೆ ಪುನೀತ್ ರಾಜ್ ಕುಮಾರ್ ಅವರು ಟ್ವೀಟ್ ಮೂಲಕ ಸಮುದ್ರದಲ್ಲಿ ಈಜುತ್ತಿರುವ ಫೋಟೋ ಬಿಡುಗಡೆ ಮಾಡಿ ನವೆಂಬರ್ 1ರಂದು ಹೊಸ ಚಿತ್ರದ ವಿವರ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಇದು ಈಗ ಕನಸಾಗಿ ಉಳಿಯಲಿದೆ.
ಕನ್ನಡ ನಟರಲ್ಲಿ ಉತ್ತಮ ಫಿಟ್ನೆಸ್ ಹೊಂದಿದ್ದ ಪುನೀತ್ ರಾಜ್ ಕುಮಾರ್ ವ್ಯಾಯಾಮ ಮಾಡುತ್ತಿರುವ ವೇಳೆಯೇ ನಿಧನ ಆಗಿರುವುದು ದೊಡ್ಡ ದುರಂತ ಎನಿಸಿದೆ. ಬಾಲ ನಟ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಪುನೀತ್ ಇನ್ನಷ್ಟು ಸಾಧನೆ ಮಾಡುವ ಹಾದಿಯಲ್ಲಿ ಸಾಗುತ್ತಿರುವ ವೇಳೆ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿರುವುದು ಅಭಿಮಾನಿಗಳನ್ನು ದುಃಖಕ್ಕೆ ದೂಡಿದೆ.
____
Be the first to comment