ಮೆಚ್ಚುಗೆ ಪಡೆದ ಪ್ರೇಮಂ ಪೂಜ್ಯಂ ಲಿರಿಕಲ್ ಸಾಂಗ್

ಲವ್ಲೀ ಸ್ಟಾರ್ ಪ್ರೇಮ್ ನಟನೆಯ ಪ್ರೇಮಂ ಪೂಜ್ಯಂ ಚಿತ್ರದ ವಿಡಿಯೋ ಲಿರಿಕಲ್ ಸಾಂಗ್ ಬಿಡುಗಡೆ ಆಗಿದ್ದು ಸಿನಿಪ್ರೇಮಿಗಳಿಂದ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ಅಕ್ಟೋಬರ್ 29ರಂದು ಬೆಳ್ಳಿತೆರೆಗೆ ಬರಲಿರುವ ಪ್ರೇಮಂ ಪೂಜ್ಯಂ ಚಿತ್ರದ ವಿಡಿಯೋ ಲಿರಿಕಲ್ ಸಾಂಗ್ ಯೂ ಟ್ಯೂಬ್ ನಲ್ಲಿ ಬಿಡುಗಡೆ ಆದ 24 ಗಂಟೆಯ ಒಳಗೆ 1.5 ಲಕ್ಷ ಜನರು ವಿಡಿಯೋ ವೀಕ್ಷಣೆ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. 1 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮುದ್ರೆ ಒತ್ತುವ ಮೂಲಕ ಹಾಡಿಗೆ ಪ್ರೋತ್ಸಾಹಿಸಿದ್ದಾರೆ.

ಈ ವಿಡಿಯೋ ಸಾಂಗ್ ನಲ್ಲಿ ಪ್ರೇಮ್ ಜೊತೆಗೆ ಮಾಸ್ಟರ್ ಆನಂದ್ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಸ್ನೇಹದ ಗಾಢ ಸಂಬಂಧ ಹಾಡಿನಲ್ಲಿ ಮೂಡಿ ಬಂದಿದೆ. ಈ ಹಾಡು ಡಾ. ಸಂದೀಪ್ ಅವರ ಕಂಠಸಿರಿಯಲ್ಲಿ ಮೂಡಿ ಬಂದಿದೆ.
ಪ್ರೇಮಂ ಪೂಜ್ಯಂ ಚಿತ್ರಕ್ಕೆ ಡಾ. ಬಿ. ಎಸ್. ರಾಘವೇಂದ್ರ ನಿರ್ದೇಶನ ಇದೆ. ರಕ್ಷಿತ್ ಕೆಡಂಬಾಡಿ, ಡಾ.ರಾಜ್ ಕುಮಾರ್ ಜಾನಕಿ ರಾಮನ್, ಡಾ. ರಾಘವೇಂದ್ರ ಎಸ್, ಮನೋಜ್ ಕೃಷ್ಣನ್ ಅವರು ಬಂಡವಾಳ ಹಾಕಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ ಇದೆ.

ಇದೊಂದು ರೋಮ್ಯಾಂಟಿಕ್ ಜಾನರ್ ಸಿನಿಮಾ ಆಗಿದ್ದು, ಚಿತ್ರದಲ್ಲಿ ಪ್ರೇಮ್ ಹಲವು ಶೇಡ್ ಗಳಲ್ಲಿ ನಟಿಸುತ್ತಿದ್ದಾರೆ. ಬೃಂದಾ ಆಚಾರ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರೇಮ್ ಜೊತೆ ಐಂದ್ರಿತಾ ರೇ, ಮಾಸ್ಟರ್ ಆನಂದ್, ಮಾಳವಿಕಾ ಅವಿನಾಶ್ ಮುಂತಾದವರು ನಟಿಸಿದ್ದಾರೆ.
ಪ್ರೇಮಂ ಪೂಜ್ಯಂ ಚಿತ್ರ ನಟ ಪ್ರೇಮ್ ಅವರ 25 ನೇ ಸಿನಿಮಾ ಆಗಿರುವುದು ವಿಶೇಷ ಆಗಿದೆ. ಈ ಕಾರಣದಿಂದ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಈ ಚಿತ್ರ ಅಲ್ಲದೇ, ಭರ್ಜರಿ 400 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಿಸಲಾಗುತ್ತಿರುವ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಅವರ ಜೀವನ ಆಧರಿಸಿದ ಸಿನಿಮಾಕ್ಕೆ ಪ್ರೇಮ್ ನಾಯಕ ಆಗಿ ಆಯ್ಕೆ ಆಗಿದ್ದಾರೆ. ಈ ಚಿತ್ರ ಹಾಲಿವುಡ್ ಮಟ್ಟದಲ್ಲಿ ತಯಾರಿ ಆಗುತ್ತಿದ್ದು, ಹಾಲಿವುಡ್ ತಂತ್ರಜ್ಞರು ಚಿತ್ರ ತಯಾರಿ ಮಾಡಲಿದ್ದಾರೆ. ಪ್ರೇಮಂ ಪೂಜ್ಯಂ ತಂಡವೇ ಕಾರ್ಯಪ್ಪ ಜೀವನಾಧರಿತ ಸಿನಿಮಾಕ್ಕೆ ಕೆಲಸ ಮಾಡಲಿದೆ. ಪ್ರೇಮಂ ಪೂಜ್ಯಂ ಚಿತ್ರದ ನಿರ್ದೇಶಕ ಬಿ ಎಸ್ ರಾಘವೇಂದ್ರ ಈ ಸಿನಿಮಾಕ್ಕೆ ನಿರ್ದೇಶನ ಮಾಡಲಿದ್ದಾರೆ ಎಂದು ಪ್ರೇಮ್ ಈಗಾಗಲೇ ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!