ನೆನಪಿರಲಿ ಪ್ರೇಮ್ ಅಭಿನಯದ ಹೊಸ ಚಿತ್ರದ ಮುಹೂರ್ತ ಪುತ್ರಿ ಅಮೃತಾ ಪ್ರೇಮ್ ಜನ್ಮ ದಿನದಂದು ನೆರವೇರಿದೆ.
ಇನ್ನೂ ಹೆಸರಿಡದ ಈ ಚಿತ್ರವನ್ನು ಹಾಸ್ಯ ನಟ ತಬಲಾ ನಾಣಿ ಮತ್ತು ಕೆ.ಆರ್.ಎಸ್.ಪ್ರೋಡಕ್ಷನ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಹೊಸಬರು ಪರಿಚಯ ಆಗುತ್ತಿದ್ದಾರೆ. ನಾಯಕನಾಗಿ ಸಂಜಯ್ ನಾಯಕಿಯಾಗಿ ಜೀವಿತ ವಸಿಷ್ಠ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ಚಿತ್ರದಲ್ಲಿ ಅಭಿನಯಿಸೋ ಮೂಲಕ ನೆನಪಿರಲಿ ಪ್ರೇಮ್ ಹೊಸಬರಿಗೆ ಸಾಥ್ ಕೊಡುತ್ತಿದ್ದಾರೆ. ಹೊಸಬರು ಮತ್ತು ಹಳಬರು ಸೇರಿ ಮಾಡ್ತಿರೋ ಈ ಚಿತ್ರವನ್ನು ಅಥರ್ವ ಆರ್ಯ ನಿರ್ದೇಶನ ಮಾಡುತ್ತಿದ್ದಾರೆ.
ಕೆಆರ್ಎಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವು ಫೆಬ್ರುವರಿ 1 ರಂದು ಚಿತ್ರೀಕರಣ ಪ್ರಾರಂಭಿಸಲಿದೆ.
ನಿರ್ದೇಶಕ ಅಥರ್ವ್ ಅವರೇ ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ. ಚಿತ್ರವು ಕುಟುಂಬದಲ್ಲಿನ ತಂದೆಯ ಪ್ರಾಮುಖ್ಯತೆಯ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ಪ್ರೇಮ್ ಸಾಫ್ಟ್ವೇರ್ ಕಂಪನಿಯನ್ನು ನಡೆಸುವ ಉದ್ಯಮಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಚಿತ್ರದ ಛಾಯಾಗ್ರಾಹಕರಾಗಿ ನಾಗರಾಜ್ ಡಿಆರ್, ಸಂಗೀತ ನಿರ್ದೇಶಕರಾಗಿ ಆಕಾಶ್ ಪರ್ವ ಮತ್ತು ಸಂಕಲನಕಾರರಾಗಿ ವೇದಿಕ್ ವೀರ ಅವರ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ.
ಚಿತ್ರದ ಸಂಪೂರ್ಣ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯಲಿದೆ. ಪೋಷಕ ಪಾತ್ರವರ್ಗದಲ್ಲಿ ಬಾಲ ರಾಜವಾಡಿ, ಗಿರೀಶ್ ಜತ್ತಿ ಮತ್ತು ಮಿತ್ರ ಮುಂತಾದವರು ಇದ್ದಾರೆ.
ತಮ್ಮನ್ನು ಹುಡುಕಿಕೊಂಡು ಬಂದ ಪಾತ್ರ ಪ್ರೇಮ್ ಅವರಿಗೆ ತುಂಬಾ ಇಷ್ಟವಾಗಿದೆ. ಇದನ್ನ ಬಿಡಲೇ ಬಾರದು ಎಂದು ಪ್ರೇಮ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
___
Be the first to comment