ಪವರ್ ಸ್ಟಾರ್ ಪುನೀತ್ ಗೆ ಭಾವುಕ ವಿದಾಯ

ಹಠಾತ್ ಆಗಿ ನಿಧನ ಹೊಂದಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರ ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.

ದುಃಖತಪ್ತ ಕೋಟ್ಯಂತರ ಅಭಿಮಾನಿಗಳ ದುಗುಡದ ನಡುವೆ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಅಂತ್ಯ ಸಂಸ್ಕಾರವನ್ನು ಈಡಿಗ ಸಂಪ್ರದಾಯದ ಪ್ರಕಾರ ನೆರವೇರಿಸಲಾಯಿತು.

ಕಂಠೀರವ ಸ್ಟುಡಿಯೋದ ಒಳಗೆ ಕುಟುಂಬಸ್ಥರು, ಅಪ್ತರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು. ಎಲ್ಲರ ಅಳುವಿನ ನಡುವೆ ಪುನೀತ್ ಅವರನ್ನು ಮಣ್ಣಿಗಿರಿಸಲಾಯಿತು. ಅಪ್ಪು ಅಂತಿಮ ಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಕಂಠೀರವ ಸ್ಟೇಡಿಯಂನಿಂದ ಕಂಠೀರವ ಸ್ಟುಡಿಯೋಕ್ಕೆ ಅಂತಿಮ ಯಾತ್ರೆ ನಡೆಯಿತು.

ಅಪ್ಪುಗೆ ಗಂಡು ಮಕ್ಕಳಿಲ್ಲದ ಕಾರಣ ರಾಘವೇಂದ್ರ ರಾಜ್‌ಕುಮಾರ್ ಅವರ ಮೊದಲ ಪುತ್ರ ವಿನಯ್ ರಾಜ್‌ಕುಮಾರ್ ಅಂತಿಮ ವಿಧಿ-ವಿಧಾನ ನೆರವೇರಿಸಿದರು. ಕುಟುಂಬಸ್ಥರು ಗುಂಡಿಯೊಳಗೆ ಅರಿಶಿಣ, ಕುಂಕುಮ ಚೆಲ್ಲಿದ ನಂತರ ಹಿಡಿ ಮಣ್ಣು ಹಾಕಿ ಅಪ್ಪುವನ್ನು ಕಳುಹಿಸಿಕೊಟ್ಟರು.

ಪುನೀತ್ ಅವರನ್ನು ಮಣ್ಣು ಮಾಡುವ ಮುನ್ನ ಅವರ ಮೃತ ದೇಹದ ಮೇಲೆ ತ್ರಿವರ್ಣ ಧ್ವಜವನ್ನು ಹೊದಿಸಲಾಯಿತು. ಅವರ ಗೌರವಾರ್ಥ ಬಂದೂಕು ಸಿಡಿಸಿ ಪೊಲೀಸರು ವಂದನೆ ಸಲ್ಲಿಸಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರು ಅಪ್ಪುವಿನ ಹಣೆಗೆ ಮುತ್ತಿಟ್ಟು ಭಾವುಕತೆ ತೋರಿದರು.

ಅಂತ್ಯ ಸಂಸ್ಕಾರದ ವೇಳೆ ಪುನೀತ್ ಕುಟುಂಬಸ್ಥರು ಅಲ್ಲದೇ, ನಟರಾದ ಯಶ್, ಗಣೇಶ್, ಜಗ್ಗೇಶ್, ದುನಿಯಾ ವಿಜಯ್, ಮಾಜಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ, ಡಿ ಕೆ ಶಿವಕುಮಾರ್, ಸಚಿವರುಗಳಾದ ಸುಧಾಕರ್, ಅಶ್ವತ್ಥ್ ನಾರಾಯಣ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಮೂರು ದಿನಗಳಿಂದ ಪುನೀತ್ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಜನರು ಆಗಮಿಸುತ್ತಿದ್ದರು. ಇನ್ನೂ ತಡವಾದರೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿ ಭದ್ರತೆಯ ಸಮಸ್ಯೆ ಉಂಟಾಗುವ ಕಾರಣ ನಿಗದಿತ ಸಮಯಕ್ಕಿಂತ ಮುಂಚೆಯೇ ಪುನೀತ್ ರಾಜ್‌ಕುಮಾರ್ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!