ನಿರ್ದೇಶಕ ಫಣೀಶ್ ಬಾರಧ್ವಾಜ್ ನೆಪಿರಬೇಕಲ್ಲ? ರಾಘವೇಂದ್ರ ರಾಜ್ ಕುಮಾರ್ ಅವರ ನಟನೆಯ ಆಡಿಸಿದಾತ ಚಿತ್ರವನ್ನು ನಿರ್ದೇಶಿಸಿದ್ದಂಥ ಡೈರೆಕ್ಟರ್. ಅವರು ಪ್ರಸ್ತುತ ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರೇ ‘ಡಾರ್ಕ್ ಫ್ಯಾಂಟಸಿ’. ಲಕ್ಷ್ಮೀ ವೆಂಕಟೇಶ್ವರ ನಿಡುಮಾಮಿಡೇಶ್ವರಿ ವೈಷ್ಣೋದೇವಿ ಸಿನಿ ಕ್ರಿಯೇಶನ್ಸ್ ಬ್ಯಾನರ್‌ನಲ್ಲಿ ಚಿತ್ರ ಈಗಾಗಲೇ ನಿರ್ಮಾಣಗೊಂಡಿದೆ.
ಫಣೀಶ್ ಭಾರಧ್ವಾಜ್ ಅವರು ಚಿತ್ರದಿಂದ ಚಿತ್ರಕ್ಕೆ ವೈವಿಧ್ಯತೆಯನ್ನು ಕಾಯ್ದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಹಾಗಾಗಿಯೇ ಹೆಸರಿನಿಂದ ಹಿಡಿದು ಪ್ರತಿಯೊಂದರಲ್ಲಿಯೂ ವಿಭಿನ್ನತೆ ಎದ್ದು ಕಾಣುತ್ತಿದೆ. ಚಿತ್ರವನ್ನು ಕತೆಗೆ ತಕ್ಕಂತೆ ಬೆಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಮಾಡಲಾಗಿದೆ. ಒಂದು ಇಂಗ್ಲಿಷ್ ಹಾಡು ಸೇರಿದಂತೆ ಒಟ್ಟು ಐದು ಹಾಡುಗಳು ಈ ಚಿತ್ರದಲ್ಲಿರುವುದಾಗಿ ತಿಳಿದು ಬಂದಿದೆ. ಚಿತ್ರದ ಕತೆಯ ಬಗ್ಗೆ ನಿರ್ದೇಶಕ ಫಣೀಶ್ ಅವರು ಹೆಚ್ಚಿನ ಮಾಹಿತಿಯನ್ನು ಹೊರಗೆ ತಂದಿಲ್ಲ. ಆದರೆ ಹಣದ ಸುತ್ತ ನಡೆಯುವ ಕತೆ ಇದು ಎನ್ನಲಾಗಿದೆ. ಕತ್ತಲಿನ ಬಂಗಲೆಯೊಂದರಲ್ಲಿ ಸಿಲುಕಿಕೊಳ್ಳುವ ನಾಯಕಿ; ಹೊರಗಡೆ ಪರಿತಪಿಸುವ ಆಕೆಯ ಪ್ರಿಯಕರ, ಬದುಕಲ್ಲಿ ನೆಲೆ ನಿಲ್ಲಲು ಪ್ರಯತ್ನಿಸುವ ನಾಯಕ, ಜೂಜಿನ ಮೂಲಕ ಹಣ ಮಾಡಬಯಸುವ ಮತ್ತೊಂದು ಪಾತ್ರ.. ಹೀಗೆ ಹಲವು ರೀತಿಯ ವ್ಯಕ್ತಿಗಳನ್ನು ಒಂದು ಕಡೆ ಸೇರಿಸಿದ್ದಾರೆ ನಿರ್ದೇಶಕರು. ಕತೆಯ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ನೀಡಿಲ್ಲವಾದರೂ, ನಿರ್ಮಾಪಕರಿಗೆ ಇಷ್ಟವಾಗಿದ್ದೇ ಈ ಕತೆ ಎನ್ನುವುದು ಗಮನಾರ್ಹ ವಿಚಾರ. ಹಾಗಾಗಿ ಸಹಜವೆನ್ನುವಂತೆ ಕತೆಯ ಬಗ್ಗೆ ಸಾಕಷ್ಟು ನಿರೀಕ್ಷೆ ಎಲ್ಲರಲ್ಲಿಯೂ ಮೂಡಿದೆ. ಸ್ವತಃ ನಿರ್ದೇಶಕ ಫಣೀಶ್ ಅವರೇ ಚಿತ್ರಕ್ಕೆ ಕತೆಯ ಜೊತೆಗೆ ಚಿತ್ರಕತೆಯನ್ನೂ ಬರೆದಿದ್ದಾರೆ.
ಶ್ರೀ ಅವರು ನಾಯಕರಾಗಿ ನಟಿಸುತ್ತಿರುವ `ಡಾರ್ಕ್ ಫ್ಯಾಂಟಸಿ’ಯಲ್ಲಿ ಇಬ್ಬರು ನಾಯಕಿಯರಿದ್ದಾರೆ. ಸುನೀತಾ ಮತ್ತು ಸುಶ್ಮಿತಾ ಎನ್ನುವುದು ಅವರ ಹೆಸರು. ಶೋಭರಾಜ್, ಮನದೀಪ್ ರಾಯ್, ಮೋಹನ್ ಜುನೇಜ ಮೊದಲಾದವರ ತಾರಾಗಣ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ತೊಂಬತ್ತರ ದಶಕದಲ್ಲಿ ನಾಯಕರಾಗಿ ಗುರುತಿಸಿಕೊಂಡಿದ್ದ ಬಾಲರಾಜ್ ಈ ಸಿನಿಮಾದ ಮೂಲಕ ಮತ್ತೆ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ನಾಗರಾಜ್ ವಿ ಮತ್ತು ನಿತಿನ್ ಆರ್ ವಿ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಒಟ್ಟಿನಲ್ಲಿ ಸಾಮಾನ್ಯ ನಿರ್ದೇಶಕರಂತೆ ಒಂದೇ ಜಾನರ್ ಹಿಂದೆ ಬೀಳದೆ ಚೌಕಟ್ಟಿನಾಚೆ ಚಿಂತಿಸುವಂಥ ನಿರ್ದೇಶಕ ಫಣೀಶ್ ಭಾರಧ್ವಾಜ್ ಎನ್ನುವುದು ಈಗಾಗಲೇ ಸಾಬೀತಾಗಿದೆ. ಮಾತ್ರವಲ್ಲ, ಟೀಸರ್ ಕೂಡ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಹಾಗಾಗಿ ಚಿತ್ರದ ಬಗ್ಗೆ ಪ್ರೇಕ್ಷಕರ ಜತೆಗೆ ಚಿತ್ರೋದ್ಯಮದಲ್ಲಿಯೂ ಒಂದು ಮಟ್ಟಿನ ನಿರೀಕ್ಷೆ ಸೃಷ್ಟಿಯಾಗಿದೆ.
Be the first to comment