ಚಿತ್ರದ ನಾಯಕಿ ಭಾಗ್ಯ (ಶೀತಲ್ ಶೆಟ್ಟಿ)ಗೆ ಮದುವೆ ವಯಸ್ಸು ಮೀರಿದರೂ ಮದುವೆಯಾಗಿರುವುದಿಲ್ಲ. ಆಕೆಯನ್ನು ನೋಡೋಕೆ ಬರುವ ಗಂಡುಗಳೆಲ್ಲಾ ಮನೆ, ಸೈಟು, ಚಿನ್ನ ಎಂದೆಲ್ಲಾ ಡಿಮ್ಯಾಂಡ್ ಮಾಡುತ್ತಿರುತ್ತಾರೆ. ಹೀಗೆ 61 ಗಂಡುಗಳಿಂದ ರಿಜೆಕ್ಟ್ ಆದ ಭಾಗ್ಯ, ಮದುವೆ ಬ್ರೋಕರ್ ಆಗುತ್ತಾಳೆ. ಅದೂ ಕೈಗೂಡದಿದ್ದಾಗ, ಪ್ರೀತಿಸಿ ಮದುವೆಯಾಗುವ ನಿರ್ಧಾರಕ್ಕೆ ಬರುತ್ತಾಳೆ. ಅದೂ ವರ್ಕೌಟ್ ಆಗದಿದ್ದಾಗ ಮೋಸ ಮಾಡಿಯಾದರೂ ಮದುವೆಯಾಗಬೇಕು ಎಂದು ಮುಂದಾಗುತ್ತಾಳೆ.
ಹೀಗಿರುವಾಗಲೇ ಸತ್ಯ (ಅರುಣ್ ಗೌಡ) ಎಂಬ ಹುಡುಗನೊಬ್ಬ ಮದುವೆಗೆ ಹೆಣ್ಣು ನೋಡಲು ಮ್ಯಾರೇಜ್ ಬ್ರೋಕರ್ ಭಾಗ್ಯಳನ್ನು ಸಂಪರ್ಕಿಸುತ್ತಾನೆ. ಆತನ ಲುಕ್ಗೆ ಬೋಲ್ಡ್ ಆಗುವ ಭಾಗ್ಯ, ಅವನನ್ನೇ ಮದುವೆಯಾಗಬೇಕೆಂದು ಒಂದು ಸುಳ್ಳು ಹೇಳುತ್ತಾಳೆ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆಯಂತೆ ಒಂದರ ಹಿಂದೊಂದು ಸುಳ್ಳು ಹೇಳುವ ಭಾಗ್ಯ, ಏನೆಲ್ಲಾ ಅವಾಂತರಗಳನ್ನು ಅನುಭವಿಸುತ್ತಾಳೆ ಎನ್ನುವುದೇ ಚಿತ್ರದ ಕಥೆ. ವರದಕ್ಷಿಣೆ ಸಮಸ್ಯೆಯನ್ನಿಟ್ಟುಕೊಂಡು ಕನ್ನಡದಲ್ಲಿ ಇದುವರೆಗೂ ಹಲವು ಚಿತ್ರಗಳು ಬಂದಿವೆ. ಅದರಲ್ಲಿ ಗಂಭೀರವಾದದ್ದೂ ಇವೆ. ಹಾಸ್ಯಮಯ ಚಿತ್ರಗಳೂ ಇವೆ.
‘ಪತಿಬೇಕು.ಕಾಮ್’ ಒಂದು ಪಕ್ಕಾ ಹಾಸ್ಯಮಯ ಚಿತ್ರ. ಇಲ್ಲಿ ಯಾವುದೇ ಲಾಜಿಕ್ ಇಲ್ಲ. ದುಡ್ಡು ಕೊಟ್ಟು ಬರುವ ಪ್ರೇಕ್ಷಕರನ್ನು ಹೊಟ್ಟೆ ತುಂಬಾ ನಗಿಸಿ ಕಳಿಸಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ನಿರ್ದೇಶಕ ರಾಕೇಶ್ ಚಿತ್ರಕಥೆ ಮಾಡಿದಂತಿದೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸನ್ನಿವೇಶಗಳನ್ನು ಸೃಷ್ಟಿಸುವುದರ ಜೊತೆಗೆ ಮಜವಾದ ಮಾತುಗಳನ್ನು ಪೋಣಿಸಿದ್ದಾರೆ. ಚಿತ್ರದ ಮೈನಸ್ ಎಂದರೆ, ಸೆಕೆಂಡ್ ಹಾಫ್ನಲ್ಲಿ ಚಿತ್ರ ಸ್ವಲ್ಪ ಅತಿ ಎನಿಸುತ್ತದೆ.
ಆದರೂ ಚಿತ್ರ ಖುಷಿಕೊಡುವುದು ಶೀತಲ್ ಶೆಟ್ಟಿಗಾಗಿ. ಶೀತಲ್ ಮೊದಲ ಬಾರಿಗೆ ಫುಲ್ ಲೆಂತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇನ್ನು ಕೃಷ್ಣ ಅಡಿಗ, ಹರಿಣಿ, ರಾಕ್ಲೈನ್ ಸುಧಾಕರ್ ಮುಂತಾದವರು ತಮ್ಮ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಚಿತ್ರದಲ್ಲಿರುವುದು ಒಂದೇ ಹಾಡು. ಆದರೆ, ಹಾಡಿಗಿಂತ ಹೆಚ್ಚು ಗಮನ ಸೆಳೆಯುವುದು ಹಿನ್ನೆಲೆ ಸಂಗೀತ. ಒಟ್ಟಾರೆ, ‘ಪತಿಬೇಕು.ಕಾಮ್’ ಪ್ರೇಕ್ಷಕರನ್ನು ಹಿಡಿದಿಡುವ ಒಂದು ಮನರಂಜನಾತ್ಮಕ ಚಿತ್ರ ಎನ್ನಬಹುದು.
Pingback: CI CD services