‘ಪಾರ್ವತಮ್ಮ’ನ ಮಗಳು ಟೀಸರ್​ ಬಿಡುಗಡೆ

ಸ್ಯಾಂಡಲ್​ವುಡ್​ನಲ್ಲಿ ನಾಯಕ ನಟರುಗಳ ಚಿತ್ರಗಳು ಒಂದು ಮೈಲುಗಲ್ಲು ದಾಟುತ್ತಿದ್ದಂತೆ ಸುದ್ದಿಯಾಗುವುದು ಸಾಮಾನ್ಯ. ಆದರೆ ಈ ಬಾರಿ ನಾಯಕಿಯೊಬ್ಬರು ತಮ್ಮ 25ನೇ ಸಿನಿಮಾ ಮೂಲಕ ಸಖತ್ ಸದ್ದು ಮಾಡಿದ್ದಾರೆ. ನಟಿ ಹರಿಪ್ರಿಯಾ ತಮ್ಮ ವೃತ್ತಿ ಜೀವನದ ಹೊಸ ಮೈಲುಗಲ್ಲು ಡಾಟರ್ ಆಫ್ ಪಾರ್ವತಮ್ಮ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ಗೊತ್ತಿದೆ. ಮಹಿಳಾ ಪ್ರಧಾನ ಕಥಾಹಂದರದ ಈ  ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ. ಈ ಹಿಂದಿನ ಸಿನಿಮಾಗಳಲ್ಲಿ ಬೋಲ್ಡ್​ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿದ್ದ ಹರಿಪ್ರಿಯ ಈ ಬಾರಿ ಮಾತ್ರ ಖಡಕ್ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ.

ಇದೊಂದು ತಾಯಿ-ಮಗಳ ಬಾಂಧವ್ಯದ ಕಥಹಂದರವಿರುವ ಈ ಸಿನಿಮಾವಾಗಿದ್ದು, ಇಲ್ಲಿ ಪಾರ್ವತಮ್ಮ ಎಂಬ ಮದರ್ ಇಂಡಿಯಾ ಪಾತ್ರದಲ್ಲಿ ಸುಮಲತಾ ಅಂಬರೀಶ್ ಅಭಿನಯಿಸಿದ್ದಾರೆ. ಪಾರ್ವತಮ್ಮನ ಪಾತ್ರವು ಕರುಣಾಮಯಿಯಾದರೆ, ಮಗಳು ವೈದೇಹಿ ಪಾತ್ರದಲ್ಲಿ ಅನ್ಯಾಯವನ್ನು ತಟ್ಟಿ ಕೇಳುವ ದಕ್ಷ ತನಿಖಾಧಿಕಾರಿಯಾಗಿ ಹರಿಪ್ರಿಯ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾವನ್ನು ಯುವ ನಿರ್ದೇಶಕ ಶಂಕರ್​ ಜೆ ನಿರ್ದೇಶಿಸಿದ್ದು, ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಟೀಸರ್​ನಲ್ಲಿ ಕೇಳಿ ಬಂದಿರುವ ಚಿತ್ರದ ಹಿನ್ನಲೆ ಸಂಗೀತವು ಹರಿಪ್ರಿಯ ಅವರ ರಗಡ್​ ಪಾತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಈ ಹಿಂದೆಯೇ ಟೈಟಲ್ ಮತ್ತು ಫಸ್ಟ್​ ಲುಕ್ ಮೂಲಕ ಒಂದಷ್ಟು ಕುತೂಹಲ ಕೆರಳಿಸಿದ್ದ ಚಿತ್ರತಂಡ ಟೀಸರ್ ಮೂಲಕ ಅದನ್ನು ಡಬಲ್​ ಮಾಡಿದ್ದಾರೆ. ಡಾಟರ್ ಆಫ್ ಪಾರ್ವತಮ್ಮ ವಿಭಿನ್ನ ಪ್ರಯತ್ನದ ಸಿನಿಮಾ ಎಂಬ ಮಾತುಗಳು ಈಗಾಗಲೇ ಗಾಂಧಿನಗರದಲ್ಲಿ ಓಡಾಡುತ್ತಿದೆ. ತಮ್ಮ 25ನೇ ಸಿನಿಮಾಗಾಗಿ  ಆ್ಯಕ್ಷನ್ ಒರಿಯೆಂಟೆಡ್​ ಸಬ್ಜೆಕ್ಟ್​ ಹಾರಿಸಿಕೊಂಡಿರುವ ಹರಿಪ್ರಿಯ ಟೀಸರ್​ ಮೂಲಕ ಹೆಣ್ಮಕ್ಳೆ ಸ್ಟ್ರಾಂಗು ಗುರು ಎಂಬ ಸಂದೇಶವನ್ನು ಕೂಡ ನೀಡಿದಂತಿರುವುದು ಸಿನಿಮಾ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!