ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಕಿಚ್ಚ ಸುದೀಪ್ ಎಂಬ ಬಿಗ್ ಬಾಸ್ ಹೇಳಿಕೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಸುದೀಪ್ ಕನ್ನಡ ಚಿತ್ರರಂಗ ಪ್ರವೇಶಿಸಿ 30 ವರ್ಷ ಆದ ಹಿನ್ನೆಲೆಯಲ್ಲಿ ದೊಡ್ಮನೆಯಲ್ಲಿ ಸಂಭ್ರಮಾಚರಣೆ ಮಾಡಲಾಗಿದೆ. ಈ ವಿಶೇಷ ಕ್ಷಣದಲ್ಲಿ ದೇಶದ ವಿವಿಧ ರಂಗಗಳ ಪ್ರಖ್ಯಾತ ಗಣ್ಯರು ಹಾಗೂ ಭಾರತೀಯ ಚಿತ್ರರಂಗದ ದಿಗ್ಗಜರು ವಿಡಿಯೋ ಸಂದೇಶಗಳ ಮೂಲಕ ಕಿಚ್ಚನಿಗೆ ಪ್ರೀತಿಯ ಶುಭಾಶಯ ಕೋರಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಸೂಹೈಲ್ ಖಾನ್, ಸೌರವ್ ಗಂಗೂಲಿ, ಮಲಯಾಳಂ ನಟ ಮೋಹನ್ ಲಾಲ್ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.
1997ರಲ್ಲಿ ‘ತಾಯವ್ವ’ ಸಿನಿಮಾಗೆ ನಾಯಕ ನಟನಾಗಿ ಪಾದಾರ್ಪಣೆ ಮಾಡಿದ ಬಳಿಕ ಸುದೀಪ್ ನಟಿಸಿದ ‘ಬ್ರಹ್ಮ’ ಮತ್ತು ‘ಓ ಕುಸುಮ ಬಾಲೆ’ ಸಿನಿಮಾಗಳು ಬಿಡುಗಡೆಯಾಗಲಿಲ್ಲ. ಉಳಿದಂತೆ ‘ಪ್ರತ್ಯರ್ಥ’ ಮತ್ತು ‘ಸ್ಪರ್ಶ’ ಸಿನಿಮಾಗಳು ಭರವಸೆ ಮೂಡಿಸುತ್ತವೆ. 2001ರಲ್ಲಿ ರಿಲೀಸ್ ಆದ ‘ಹುಚ್ಚ’ಸಿನಿಮಾ ಕಿಚ್ಚ ಸುದೀಪ್ ಅವರ ಬಾಳಲ್ಲಿ ಹೊಸ ಅಧ್ಯಾಯ ಶುರು ಮಾಡಿತು.
ಕಿಚ್ಚ ಸುದೀಪ್ , ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆ ಸೇರಿದಂತೆ 57 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ಮಾಣಿಕ್ಯ’, ‘ಮೈ ಆಟೋಗ್ರಾಫ್’, ‘ವೀರ ಮದಕರಿ’, ‘ಕೆಂಪೇಗೌಡ’ ಸೇರಿದಂತೆ 6 ಸಿನಿಮಾ ನಿರ್ದೇಶನ ಮಾಡಿದ್ದಾರೆ. 16ಕ್ಕೂ ಹೆಚ್ಚು ಸಿನಿಮಾಗಳಿಗೆ ಹಿನ್ನಲೆ ಗಾಯಕರಾಗಿದ್ದಾರೆ.
ಸುದೀಪ್ ಅವರನ್ನು ಹೊಗಳುವ ಭರದಲ್ಲಿ ಅವರೇ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಎಂದು ಬಿಗ್ ಬಾಸ್ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಕೆಲವರು ವಿಷ್ಣುವರ್ಧನ್ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಎಂದರೆ, ಕೆಲವರು ಸುದೀಪ್ ಅನ್ನುತ್ತಿದ್ದಾರೆ. ಕೆಜಿಎಫ್ ನಂತರವೇ ಪ್ಯಾನ್ ಇಂಡಿಯಾ ಕಾನ್ಪೆಪ್ಟ್ ಬಂದಿದ್ದು ರಾಕಿಂಗ್ ಸ್ಟಾರ್ ಯಶ್ ಅವರೇ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಎಂಬುದು ಅವರ ಅಭಿಮಾನಿಗಳ ವಾದವಾಗಿದೆ.
—-





Be the first to comment