‘ತಾಕತ್ತಿದ್ದರೆ ಮೀಸಲಾತಿ ಹೋರಾಟಕ್ಕೆ ಬನ್ನಿ ಸುದೀಪ್’

‘ನಾಯಕರು ಎಂದು ಹೇಳಿಕೊಂಡು ಕೇಕೆ ಹಾಕಿಸಿಕೊಳ್ಳುವುದಲ್ಲ. ನಾಯಕರ ಮಗನಾಗಿದ್ದರೆ ಹೋರಾಟಕ್ಕೆ ಬನ್ನಿ ಮಿಸ್ಟರ್ ಸುದೀಪ್’ ಎಂದು  ಚಿತ್ರದುರ್ಗದಲ್ಲಿ ನಡೆದ ನಾಡಪ್ರಭು ರಾಜವೀರ ಮದಕರಿ ನಾಯಕ ಜಯಂತೋತ್ಸವದಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸವಾಲು ಹಾಕಿದ್ದಾರೆ.

ನಟ ಕಿಚ್ಚ ಸುದೀಪ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅಭಿಮಾನಿಗಳು ಕೂಗಿದ ಘೋಷಣೆಗಳು ಉಗ್ರಪ್ಪ ಅವರ ಆಕ್ರೋಶಕ್ಕೆ ಕಾರಣವಾಗಿವೆ. ಭಾಷಣದ ಮಧ್ಯೆ ‘ಕಿಚ್ಚ, ಕಿಚ್ಚ’ ಎಂಬ ಘೋಷಣೆಗಳು ಮೊಳಗುತ್ತಿದ್ದಂತೆ ಅಸಮಾಧಾನಗೊಂಡ ಉಗ್ರಪ್ಪ ವೇದಿಕೆಯಲ್ಲೇ ತಮ್ಮ ಆಕ್ರೋಶ  ವ್ಯಕ್ತಪಡಿಸಿದ್ದಾರೆ.

‘ಮೀಸಲಾತಿ ಹೆಚ್ಚಳದ ಹೋರಾಟಕ್ಕೆ ಬನ್ನಿ. ನಮಗೆ ಶೇ. 56ರಷ್ಟು ಮೀಸಲಾತಿ ಬೇಕು. ಅದಕ್ಕಾಗಿ ಕೇಕೆ ಹಾಕಬೇಕು. ದಮ್ಮು, ತಾಕತ್ತು ಇದ್ದರೆ ಅದಕ್ಕಾಗಿ ಹೋರಾಡಬೇಕು’ ಎಂದು ಉಗ್ರಪ್ಪ ಸವಾಲು ಹಾಕಿದರು.

ಜಯಂತೋತ್ಸವದಲ್ಲಿ ನಡೆದ ಈ ಮಾತಿನ ಚಕಮಕಿ  ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಮುಖಂಡ ರಾಜುಗೌಡ ಅವರ ಟೀಕೆಗೆ ಉಗ್ರಪ್ಪ   ತಿರುಗೇಟು ನೀಡಿದ್ದಾರೆ.

‘ಸುದೀಪ್ ಅವರು ಸಮಾಜದ ಪರವಾಗಿ ಹೋರಾಟಕ್ಕೆ ಬರಬೇಕು ಎಂದು ಮಾತ್ರ ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? . ರಾಜುಗೌಡ ಅವರಿಗೆ ಸುದೀಪ್ ಇತ್ತೀಚೆಗೆ ಪರಿಚಯವಾಗಿರಬಹುದು. ಆದರೆ ತಮಗೆ ಹಲವು ವರ್ಷಗಳಿಂದಲೂ ಸುದೀಪ್ ಪರಿಚಯವಿದೆ. 2003ರಲ್ಲೇ ಸುದೀಪ್ ಅವರ ತಂದೆ ಸಂಜೀವ್ ಅವರನ್ನು ಭೇಟಿಯಾಗಿದ್ದೆ.. ಆಗ ಅವರ ತಂದೆ, “ನಾವೂ ನಾಯಕರು” ಎಂದು ಹೇಳಿದ್ದರು’ ಎಂಬ ಹಳೆಯ ಘಟನೆಯನ್ನು  ಸ್ಮರಿಸಿದ್ದಾರೆ.

‘ಸುದೀಪ್ ಅವರ ನಾಯಕತ್ವದಲ್ಲೇ ಹೋರಾಟ ನಡೆಸಲು ಸಿದ್ಧವಿದ್ದೇವೆ. ಸ್ವಾಮೀಜಿಗಳು ಬಂದರೂ ಅವರೊಂದಿಗೆ ಕೈಜೋಡಿಸಿ ಹೋರಾಟ ಮಾಡುತ್ತೇವೆ’ ಎಂದು ಅವರು ತಿಳಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!