ನಿನಾಸಂ ಸತೀಶ್ ನಟನೆಯ ಆಯೋಗ್ಯ ಚಿತ್ರ ಐವತ್ತು ದಿನಗಳ ಗಡಿ ದಾಟಿ ಮುನ್ನಡೆಯುತ್ತಿರುವ ಬೆನ್ನಲ್ಲೇ ಅವರ ಸಂಭಾವನೆಯೂ ಜಾಸ್ತಿಯಾಗಿದೆ ಎಂಬ ಸುದ್ದಿ ಗಾಂಧಿನಗರಿಯಲ್ಲಿ ಗಿರಕಿ ಹೊಡೆಯುತ್ತಿದೆ. ಅದೆಷ್ಟು ನಿಜನೋ ಗೊತ್ತಿಲ್ಲ. ಆದರೆ ಅವರು ಒಂದು ಗೆಲುವಿನ ಖುಷಿಯಲಿರುವುದಂತು ನಿಜ.
ಇದೀಗ ರಾಜ್ಯದಾದ್ಯಂತ ಆಯೋಗ್ಯ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದು ನಿನಾಸಂ ಸತೀಶ್ ಅವರಿಗೆ ಯಶಸ್ಸು ತಂದು ಕೊಟ್ಟಿದೆ. ಇದು ಅವರಿಗೆ ಮಾತ್ರವಲ್ಲ ಇಡೀ ಚಿತ್ರತಂಡದ ಯಶಸ್ಸಾಗಿದೆ. ಆದರೆ ಸತೀಶ್ ಅವರದು ಮಾತ್ರ ಸಂಭಾವನೆ ಏರಿಕೆ ಯಾಗಿದ್ದು, ಕೋಟಿ ದಾಟಿ ಹತ್ತತ್ತಿರ ಎರಡು ಕೋಟಿ ಮೀರಿದೆ ಎಂಬುದು ಈಗ ಕೇಳಿ ಬಂದಿರುವ ಮಾತುಗಳಾಗಿವೆ.
ಅಯೋಗ್ಯ ಚಿತ್ರದ ಯಶಸ್ಸಿನ ನಂತರ ನೀನಾಸಂ ಸತೀಶ್ ಅವರ ಬಳಿಗೆ ನಿರ್ಮಾಪಕರು ಮುಗಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಳೆದೂ ತೂಗಿಯೇ ಅವಕಾಶಗಳು ಮತ್ತು ಕಥೆಗಳನ್ನು ಸತೀಶ್ ಮ್ಯಾನೇಜ್ ಮಾಡುತ್ತಿದ್ದಾರೆ. ಅಯೋಗ್ಯದಂಥ ಭಿನ್ನವಾದ ಕಥೆಯನ್ನೀಗ ಜನ ಇಷ್ಟ ಪಟ್ಟಿದ್ದಾರೆ. ಆದ್ದರಿಂದಲೇ ತನ್ನ ಜವಾಬ್ದಾರಿಯೂ ಹೆಚ್ಚಾಗಿದೆ ಅಂದುಕೊಂಡಿರೋ ನೀನಾಸಂ ಸತೀಶ್ ತುಂಬಾ ಯೋಚಿಸಿ ಒಂದು ಕಥೆಯನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಅಡ್ವಾನ್ಸ್ ಕೂಡಾ ಆಗಿದೆಯಂತೆ.
ಇನ್ನುಳಿದಂತೆ ಚಂಬಲ್ ಮತ್ತು ಗೋಧ್ರಾ ಚಿತ್ರಗಳು ಈಗಾಗಲೇ ರೆಡಿಯಾಗಿವೆ. ತಮಿಳು ಚಿತ್ರವೊಂದು ವಾರದೊಪ್ಪತ್ತಿನಲ್ಲಿಯೇ ಚಿತ್ರೀಕರಣ ಶುರು ಮಾಡಲಿದೆ. ಸದ್ಯಕ್ಕೆ ನಿರ್ದೇಶಕರೂ ಕೂಡಾ ನೀನಾಸಂ ಸತೀಶ್ ಮುಂದೆ ಸಾಲುಗಗಟ್ಟಿ ನಿಂತಿದ್ದಾರೆ. ಯಾವುದಕ್ಕೂ ಅರ್ಜೆಂಟು ಮಾಡದೆ ಭಿನ್ನವಾದ ಕಥೆಗಳತ್ತ ಮಾತ್ರವೇ ಸತೀಶ್ ಗಮನ ನೆಟ್ಟಿದ್ದಾರೆ. ಭರ್ಜರಿ ಗೆಲುವಿನ ಸಿನಿಮಾ ಮೂಡಿಬಂದರೆ ಹೀರೋಗಳು ತಾವಾಗಿ ತಾವು ಸಂಭಾವನೆ ಹೆಚ್ಚಿಸಿಕೊಳ್ಳೋ ಅಗತ್ಯವೇ ಇರುವುದಿಲ್ಲ. ಬದಲಿಗೆ ಇಂಡಸ್ಟ್ರಿಯೇ ಅವರ ಮಾರ್ಕೆಟ್ಟಿಗೆ ತಕ್ಕ ಪೇಮೆಂಟು ಫಿಕ್ಸು ಮಾಡುತ್ತದೆ. ಇದು ಸತೀಶ್ ಅವರ ವಿಚಾರದಲ್ಲೂ ನಿಜವಾದಂತಿದೆ.
Be the first to comment